ನವದೆಹಲಿ: ಇತ್ತೀಚೆಗೆ ದೇಶದ ಕೆಲವು ಪ್ರಸಿದ್ಧ ದೇವಾಲಯಗಳಲ್ಲಿ ದೊಡ್ಡ ಮಟ್ಟದ ಆರ್ಥಿಕ ಮತ್ತು ಆಡಳಿತಾತ್ಮಕ ಹಗರಣಗಳ ಆರೋಪಗಳು ಕೇಳಿಬರುತ್ತಿವೆ.
ಅದರಲ್ಲೂ ಕೆಲವು ಕಡೆ ದೇವಾಲಯಗಳ ಪ್ರಸಾದದಲ್ಲಿನ ಕಲಬೆರಕೆ ಪ್ರಕರಣಗಳು ಮತ್ತು ಸಿಬ್ಬಂದಿಯು ಹುಂಡಿ ಹಣ ಕಳ್ಳತನ ಮಾಡಿರುವ ಘಟನೆಗಳು ಕೋಟ್ಯಂತರ ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ.
ಇತ್ತೀಚೆಗಿನ ಪ್ರಮುಖ ಪ್ರಕರಣಗಳು:
ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ: 2026ರ ಜೂನ್ನಲ್ಲಿ ರಾಮಮಂದಿರದ ದೇಣಿಗೆಯಲ್ಲಿ ಕಳ್ಳತನ ನಡೆದಿರುವ ವಿಷಯ ಬೆಳಕಿಗೆ ಬಂದಿತು. ದೇವಾಲಯದ ದೇಣಿಗೆ ಎಣಿಕೆ ಕೇಂದ್ರದಿಂದ ಪ್ರತಿದಿನ ವ್ಯವಸ್ಥಿತವಾಗಿ ನಗದು ಹಣವನ್ನು ಲೂಟಿ ಮಾಡುತ್ತಿರುವ ಈ ಘಟನೆಯು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿತು. ಕಳೆದ ಮಹಾಕುಂಭ ಮೇಳದ ಅವಧಿಯಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದಾಗ ಅಪಾರ ಪ್ರಮಾಣದ ನಗದನ್ನು ಎಣಿಸಲು ದೇವಾಲಯವು ತಾತ್ಕಾಲಿಕ ಸಿಬ್ಬಂದಿಯನ್ನು ನೇಮಿಸಿಕೊಂಡಿತ್ತು. ಈ ಸಿಬ್ಬಂದಿ, ಜೇಬುಗಳಿಲ್ಲದ ಬಟ್ಟೆಗಳನ್ನು ಧರಿಸಬೇಕೆಂಬ ಕಟ್ಟುನಿಟ್ಟಿನ ನಿಯಮವನ್ನು ಉಲ್ಲಂಘಿಸಿ, ಹಣವನ್ನು ತಮ್ಮ ಜೇಬು ಮತ್ತು ಸಾಕ್ಸ್ಗಳಲ್ಲಿ ಅಡಗಿಸಿ, ಶೌಚಾಲಯಗಳಲ್ಲಿ ಬಚ್ಚಿಟ್ಟು ಹೊರಗೆ ಸಾಗಿಸುತ್ತಿದ್ದರು ಎನ್ನುವ ವಿಷಯ ಬೆಳಕಿಗೆ ಬಂದಿತ್ತು. ತನಿಖೆಯ ವೇಳೆ ಪ್ರತಿದಿನ ₹6 ಲಕ್ಷದಿಂದ ₹8 ಲಕ್ಷದವರೆಗೆ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಘಟನೆಯನ್ನು ವಿಶೇಷ ತನಿಖಾ ತಂಡ(ಎಸ್ಐಟಿ) ತನಿಖೆ ನಡೆಸುತ್ತಿದೆ.
ಬದರಿನಾಥ ಧಾಮ: ಬದರಿನಾಥ ಧಾಮದ ಸಿಬ್ಬಂದಿ ಕಾಣಿಕೆ ದರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಡೆಹರಾಡೂನ್ ಮೂಲದ ಹಿಂದೂ ಸಂಘಟನೆ ಕಾಲ ಭೈರವ ಸೇನಾ ಆರೋಪ ಮಾಡಿದೆ. ದೇಗುಲ ಸಮಿತಿ ಮುಖ್ಯಸ್ಥರ ಆಪ್ತ ಸಹಾಯಕರೊಬ್ಬರು ಕಾಣಿಕೆ ಹಣ ದುರ್ಬಳಕೆ ಮಾಡಿದ್ದಾರೆ ಎಂದು ದೂರಿದ್ದು, ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯವನ್ನು ಸಾರ್ವಜನಿಕಗೊಳಿಸುವಂತೆ ಆಗ್ರಹಿಸಿದ್ದಾರೆ. ಈ ಪ್ರಕರಣದ ತನಿಖೆಗೆ ಸಮಿತಿ ರಚಿಸಲಾಗಿದೆ.
ಶಬರಿಮಲೆ ದೇವಸ್ಥಾನ: ಕೇರಳದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ಶಬರಿಮಲೆಯಲ್ಲಿ ಭಕ್ತರು ಕಾಣಿಕೆಯಾಗಿ ನೀಡಿದ ಚಿನ್ನದ ಶುದ್ಧತೆ, ತೂಕದ ಲೆಕ್ಕಾಚಾರ ಮತ್ತು ದೇವಾಲಯದ ಗರ್ಭಗುಡಿಯ ಚಾವಣಿಗೆ ಚಿನ್ನದ ಲೇಪನ ಮಾಡುವ ಗುತ್ತಿಗೆಯಲ್ಲಿ ನಡೆದ ಅಕ್ರಮಗಳ ಕುರಿತು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸಿತ್ತು.
ವೈಷ್ಣೋದೇವಿ ದೇವಸ್ಥಾನ: ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಹಿಂದೂ ದೇವಾಲಯವಾದ ವೈಷ್ಣೋದೇವಿ ದೇವಸ್ಥಾನದಲ್ಲಿ ಅಲ್ಲಿನ ಸಿಬ್ಬಂದಿಯು ವಂಚನೆ ಮಾಡದಿದ್ದರೂ, ಸೈಬರ್ ಅಪರಾಧಿಗಳು ದೇವಸ್ಥಾನದ ಅಧಿಕೃತ ವೆಬ್ಸೈಟ್ನಂತೆ ನಕಲಿ ಸೈಟ್ ಸೃಷ್ಟಿಸಿ ಹೆಲಿಕಾಪ್ಟರ್ ಟಿಕೆಟ್ ಮತ್ತು ವಿಐಪಿ ದರ್ಶನದ ಪಾಸ್ಗಳನ್ನು ಮಾರಿ ಭಕ್ತರಿಂದ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪ ಕೇಳಿಬರುತ್ತಿದೆ.
ಗುರುವಾಯೂರು ದೇವಸ್ಥಾನ: ಲೆಕ್ಕಪರಿಶೋಧನೆಯ ನಂತರ ಕೇರಳದ ಗುರುವಾಯೂರು ದೇವಸ್ಥಾನದಲ್ಲಿ ಹಗರಣದ ಆರೋಪಗಳು ಕೇಳಿಬಂದಿದ್ದವು. ದೇವಸ್ಥಾನಕ್ಕೆ ಸೇರಿದ ನೂರಾರು ಕೆ.ಜಿ ಚಿನ್ನ, ಬೆಳ್ಳಿ ಮತ್ತು ಅಡುಗೆ ಪಾತ್ರೆಗಳು ಕಾಣೆಯಾಗಿವೆ ಎಂದು ವರದಿಯಾಗಿತ್ತು. ಹಾಗೆಯೇ ಎಸ್ಬಿಐ ಬ್ಯಾಂಕ್ನಲ್ಲಿಟ್ಟಿದ್ದ ಠೇವಣಿ ಹಣವನ್ನು ದುರುಪಯೋಗ ಪಡಿಸಿಕೊಂಡ ಆರೋಪಗಳು ಕೇಳಿಬಂದಿದ್ದವು. ಆದರೆ, ಗುರುವಾಯೂರು ದೇವಸ್ವಂ ಮಂಡಳಿಯು ಈ ಆರೋಪಗಳನ್ನು ನಿರಾಕರಿಸಿತ್ತು.
ರಾಮೇಶ್ವರಂ ಪ್ರಸಾದ ಲಡ್ಡು ವಂಚನೆ: ತಮಿಳುನಾಡಿನ ಐತಿಹಾಸಿಕ ರಾಮೇಶ್ವರಂನ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ 2026ರ ಮೇನಲ್ಲಿ ಲಡ್ಡು ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ದೇವಾಲಯಕ್ಕೆ ಬರುವ ಭಕ್ತರಿಗೆ ಉಚಿತವಾಗಿ ಲಡ್ಡು ಪ್ರಸಾದ ನೀಡುವ ಕಲ್ಯಾಣ ಯೋಜನೆಯನ್ನು ಜಾರಿಗೆ ತರಲಾಗಿತ್ತು. ದೇವಸ್ಥಾನದ ಜೂನಿಯರ್ ಅಸಿಸ್ಟೆಂಟ್ಗಳು ಮತ್ತು ಎಣಿಕೆ ಸಿಬ್ಬಂದಿ, ಭಕ್ತರಿಗೆ ಉಚಿತವಾಗಿ ನೀಡಬೇಕಿದ್ದ ಲಡ್ಡುಗಳ ಬದಲಾಗಿ, ಹೊರಗಿನ ಮಾರುಕಟ್ಟೆಯಿಂದ ಕಚ್ಚಾ ವಸ್ತುಗಳನ್ನು ಖರೀದಿಸಿ ಅಕ್ರಮವಾಗಿ 11 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಲಡ್ಡುಗಳನ್ನು ತಯಾರಿಸಿ, ಅದನ್ನು ದೇವಸ್ಥಾನದ ಅಧಿಕೃತ ಕೌಂಟರ್ಗಳಲ್ಲೇ ಭಕ್ತರಿಗೆ ನಗದಿಗೆ ಮಾರಾಟ ಮಾಡುತ್ತಿದ್ದರು. ಈ ಮೂಲಕ ಕಳೆದ ಎರಡು ವರ್ಷಗಳಲ್ಲಿ ಸುಮಾರು ₹3.40 ಕೋಟಿ ವಂಚನೆ ಎಸಗಿದ್ದರು. ಘಟನೆಗೆ ಸಂಬಂಧಿಸಿದಂತೆ ಆರು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ.
ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ: ಆಂಧ್ರಪ್ರದೇಶದ ಪ್ರಮುಖ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಾಲಯದ ಪ್ರಸಿದ್ಧ ಲಡ್ಡು ಪ್ರಸಾದ ತಯಾರಿಸಲು ಬಳಸುವ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸಲಾಗಿದೆ ಎಂಬ ಪ್ರಯೋಗಾಲಯದ ವರದಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಎಸ್ಐಟಿ ತನಿಖೆ ಮಾಡುತ್ತಿದೆ. ಅದರ ನಂತರ, ಇಲ್ಲಿ ಕಟ್ಟುನಿಟ್ಟಾದ ನಿಯಮಗಳನ್ನು ಜಾರಿ ಮಾಡಲಾಗಿದೆ.
ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನ: ವಿಶ್ವದ ಅತ್ಯಂತ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಚಿನ್ನದ ಕೊಠಡಿಯ ಆಡಿಟ್ ವೇಳೆ ಲೋಪವಾಗಿರುವುದು ಭಾರಿ ಸುದ್ದಿಯಾಗಿತ್ತು. ಸುಪ್ರೀಂ ಕೋರ್ಟ್ ನೇಮಿಸಿದ ಅಮಿಷಿಯಸ್ ಕ್ಯೂರಿ ಮತ್ತು ಸಿಎಜಿ ಆಡಿಟ್ನಲ್ಲಿ ತೀವ್ರ ಆಡಳಿತಾತ್ಮಕ ಲೋಪಗಳು ಕಾಣಿಸಿಕೊಂಡಿದ್ದವು. ಇಲ್ಲಿನ ರಹಸ್ಯ ಕೊಠಡಿಗಳಲ್ಲಿದ್ದ ಹಲವಾರು ಕೆಜಿ ಚಿನ್ನದ ಆಭರಣಗಳು ಮತ್ತು ಚಿನ್ನದ ಲೇಪನದಲ್ಲಿ ವ್ಯತ್ಯಾಸವಿರುವುದು ಕಂಡುಬಂದಿತ್ತು.
ಇದಲ್ಲದೇ ಮಥುರಾದ ಕೃಷ್ಣ ದೇಗುಲ ಹಾಗೂ ಕುಂಭಮೇಳದ ವೇಳೆಯಲ್ಲಿ ಕೂಡ ದೇಣಿಗೆ ಕಳ್ಳತನದ ಆರೋಪಗಳು ಕೇಳಿ ಬರುತ್ತಿವೆ.

