ವಾಷಿಂಗ್ಟನ್: ಭಾರತೀಯ ಮೂಲದ ನಾಸಾ ಗಗನಯಾತ್ರಿ ಅನಿಲ್ ಮೆನನ್ ಅವರು ಎಂಟು ತಿಂಗಳ ಯೋಜನೆಯ ಭಾಗವಾಗಿ ಜುಲೈ 14ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಪ್ರಯಾಣ ಬೆಳೆಸಲಿದ್ದಾರೆ.
ಕಝಾಕಿಸ್ತಾನ್ನ ಬೈಕನೂರ್ ಕಾಸ್ಮೋಡ್ರೋಮ್ನಿಂದ ರಷ್ಯಾದ ರೋಸ್ಕಾಸ್ಮೋಸ್ ಸಂಸ್ಥೆಯ 'ಸೋಯುಜ್ ಎಂಎಸ್-29' (Soyuz MS-29) ಗಗನನೌಕೆಯ ಮೂಲಕ ಅವರು ಬಾಹ್ಯಾಕಾಶಕ್ಕೆ ಜಿಗಿಯಲಿದ್ದಾರೆ.
ರಷ್ಯಾದ ಪಯೋಟರ್ ಡುಬ್ರೊವ್ ಮತ್ತು ಅನ್ನಾ ಕಿಕಿನಾ ಅವರು ಮೆನನ್ ಜೊತೆ ಈ ಪಯಣದಲ್ಲಿ ಸಾಥ್ ನೀಡಲಿದ್ದಾರೆ.
ಯಾರು ಈ ಅನಿಲ್ ಮೆನನ್?
ಅಮೆರಿಕದ ಮಿನ್ನಿಯಾಪೋಲಿಸ್ನಲ್ಲಿ ಭಾರತೀಯ ಮತ್ತು ಉಕ್ರೇನಿಯನ್ ವಲಸಿಗ ದಂಪತಿಗೆ ಜನಿಸಿದ ವರ್ಷದ ಅನಿಲ್ ಮೆನನ್ ಅವರು ತುರ್ತು ಚಿಕಿತ್ಸಾ ವೈದ್ಯ (Emergency Medicine Physician) ಹಾಗೂ ಯುಎಸ್ ಸ್ಪೇಸ್ ಫೋರ್ಸ್ನ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಯುಎಸ್ ಏರ್ ಫೋರ್ಸ್ನಲ್ಲಿದ್ದಾಗ ಅಫ್ಗಾನಿಸ್ತಾನದ ಮುಂಚೂಣಿಯಲ್ಲಿ ಸೇವೆ ಸಲ್ಲಿಸಿದ ಅನುಭವ ಇವರಿಗಿದೆ.
ಹಿಮಾಲಯನ್ ಪಾರುಗಾಣಿಕಾ (ರೆಸ್ಕ್ಯು ಸೆಂಟರ್) ಸಂಸ್ಥೆಯ ಪರವಾಗಿ ಮೌಂಟ್ ಎವರೆಸ್ಟ್ ಏರುವ ಪರ್ವತಾರೋಹಿಗಳ ವೈದ್ಯಕೀಯ ಆರೈಕೆ ಮಾಡಿದ್ದಾರೆ.
ರೋಟರಿ ಅಂಬಾಸಿಡರ್ ಸ್ಕಾಲರ್ ಆಗಿ ಭಾರತದಲ್ಲಿ ಒಂದು ವರ್ಷ ಕಾಲ ಇದ್ದು, ಪೋಲಿಯೋ ಲಸಿಕೆ ಅಭಿಯಾನದ ಯಶಸ್ಸಿಗೆ ಶ್ರಮಿಸಿದ್ದಾರೆ.
2014 ರಲ್ಲಿ ನಾಸಾಗೆ ಫ್ಲೈಟ್ ಸರ್ಜನ್ ಆಗಿ ಸೇರಿದ ಇವರು, 2018 ರಲ್ಲಿ ಸ್ಪೇಸ್ ಎಕ್ಸ್ (Sಠಿಚಿಛಿeಘಿ) ಸಂಸ್ಥೆಯ ವೈದ್ಯಕೀಯ ಕಾರ್ಯಕ್ರಮದ ಮುಖ್ಯಸ್ಥರಾದರು. ಸ್ಟಾರ್ಶಿಪ್ ರಾಕೆಟ್ ಅಭಿವೃದ್ಧಿ ಹಾಗೂ ಸಂಸ್ಥೆಯ ಮೊದಲ ಮಾನವ ಸಹಿತ ಬಾಹ್ಯಾಕಾಶ ಯಾನದ ಸಿದ್ಧತೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
2021ರ ಡಿಸೆಂಬರ್ನಲ್ಲಿ ನಾಸಾ ಗಗನಯಾತ್ರಿಯಾಗಿ ಆಯ್ಕೆಯಾಗಿ ಎರಡು ವರ್ಷಗಳ ಕಠಿಣ ತರಬೇತಿಯನ್ನು ಪೂರೈಸಿದ್ದಾರೆ.
ಅನಿಲ್ ಮೆನನ್ ಅವರ ಪತ್ನಿ ಅನ್ನಾ ವಿಲ್ಹೆಲ್ಮ್ ಕೂಡ ಒಬ್ಬ ಗಗನಯಾತ್ರಿ. ಅವರು ಸೆಪ್ಟೆಂಬರ್ 2024ರಲ್ಲಿ ಸ್ಪೇಸ್ ಎಕ್ಸ್ನ 'ಪೋಲಾರಿಸ್ ಡಾನ್' ಖಾಸಗಿ ಬಾಹ್ಯಾಕಾಶ ಯಾನದ ಮೂಲಕ ಐದು ದಿನಗಳ ಕಾಲ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.

