ಟೆಹರಾನ್: ಪರಮೋಚ್ಚ ನಾಯಕರಾಗಿದ್ದ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ ಅಧ್ಯಕ್ಷ ಟ್ರಂಪ್, ಇಸ್ರೇಲ್ ಮತ್ತು ಯುರೋಪಿಯನ್ ದೇಶಗಳ ಪ್ರಮುಖ ನಾಯಕರನ್ನು ಇರಾನ್ ಗುರಿಯಾಗಿಸಿಕೊಂಡಿದೆ ಎಂದು ಅಲ್ಲಿನ ದಿನ ಪತ್ರಿಕೆಯೊಂದು ವರದಿ ಮಾಡಿದೆ.
ಇರಾನ್‌ನಿಂದ ಪ್ರಕಟಗೊಳ್ಳುವ ಹಮ್‌ಶಹ್ರಿ ಪತ್ರಿಕೆಯಲ್ಲಿ, ಇರಾನ್ ಗುರಿಯಾಗಿಸಿಕೊಂಡಿರುವ ವಿದೇಶಿ ನಾಯಕರ ಹೆಸರುಗಳು ಇರುವ ಪಟ್ಟಿಯನ್ನು ಪ್ರಕಟ ಮಾಡಲಾಗಿದೆ.
ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ರ್, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಸೇರಿದಂತೆ 13 ಪ್ರಮುಖ ನಾಯಕರ ಹೆಸರಿದೆ.
ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಹತ್ಯೆಯಾಗಿದ್ದ ಖಮೇನಿ ಅವರ ಸಾವಿಗೆ ಪ್ರತೀಕಾರವಾಗಿ ಈ ನಾಯಕರನ್ನು ಕೊಲ್ಲುವುದಾಗಿ ಮೊಜ್ತಬಾ ಖಮೇನಿ ಶಪಥ ಮಾಡಿದ್ದಾರೆ ಎಂದು ವರದಿಯಾಗಿದೆ.
'ಈ ಅಪರಾಧಿಗಳು, ತಮ್ಮ ಹಾಸಿಗೆಯ ಮೇಲೆಯೇ ಶಾಂತಿಯುತವಾಗಿ ಮರಣಹೊಂದುವ ಆಸೆಯನ್ನು ತಮ್ಮೊಂದಿಗೆಯೇ ಸಮಾಧಿಗೆ ಕೊಂಡೊಯ್ಯಲಿದ್ದಾರೆ' ಎಂದು ಮೊಜ್ತಬಾ ಖಮೇನಿ ಹೇಳಿದ್ದರು.
ಮೊಜ್ತಬಾ ಖಮೇನಿ ಅವರು, ನಾವು ಯಾರ ಮೇಲೆ ದಾಳಿ ಮಾಡುತ್ತೇವೆ ಎನ್ನುವ ಪಟ್ಟಿ ಸಿದ್ದವಿದೆ ಎಂದು ಹೇಳಿದ್ದರು. ಆದರೆ, ಯಾವುದೇ ವೈಯಕ್ತಿಕ ಹೆಸರುಗಳನ್ನು ಉಲ್ಲೇಖಿಸಿರಲಿಲ್ಲ. ಹಾಗಾಗಿ, ಹಮ್‌ಶಹ್ರಿ ಪತ್ರಿಕೆಯಲ್ಲಿರುವ ವರದಿಯು ಅಧಿಕೃತವೇ ಎನ್ನುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.

