ಟೆಹರಾನ್: ಪಶ್ಚಿಮ ಏಷ್ಯಾ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಅಮೆರಿಕದೊಂದಿಗೆ ನಡೆದಿರುವ ಮಾತುಕತೆ ಹಾಗೂ ಮತ್ತೆ ಆರಂಭವಾಗಿರುವ ದಾಳಿ-ಪ್ರತಿದಾಳಿಗಳ ಕುರಿತು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ಶಾಂತಿ ಮಾತುಕತೆ, ಹೊರ್ಮುಜ್ ಜಲಸಂಧಿಯನ್ನು ವಾಣಿಜ್ಯ ಚಟುವಟಿಕೆಗಳಿಗೆ ಮುಕ್ತಗೊಳಿಸುವ ನಿಟ್ಟಿನಲ್ಲಿ ಉದ್ದೇಶಿತ ಒಪ್ಪಂದದ ತಿಳುವಳಿಕೆಯ ಐದನೇ ಅಂಶದ ಪುಟವನ್ನು ಹಂಚಿಕೊಂಡು, ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದಾರೆ.
ʼಏಕ ಪಕ್ಷೀಯ ಒಪ್ಪಂದಗಳ ಯುಗ ಮುಗಿದಿದೆ. ನಾವು ಈಗಾಗಲೇ ತಿಳಿಸಿದ್ದೇವೆ. ನಿಮ್ಮ ಮಾತನ್ನು ಉಳಿಸಿಕೊಳ್ಳಿ, ಇಲ್ಲವೇ ತಕ್ಕ ಬೆಲೆ ತೆರುತ್ತೀರಿ. ವಾಸ್ತವ ಕಠೋರವಾಗಿರುತ್ತದೆʼ ಎಂದು ಎಚ್ಚರಿಸಿದ್ದಾರೆ.
ಘಾಲಿಬಾಫ್ ಕಳೆದವಾರವೂ ಇಂಥದೇ ಸಂದೇಶ ರವಾನಿಸಿದ್ದರು. ʼಬೆದರಿಕೆಯೊಡ್ಡುವುದು ಮತ್ತು ಕೊಟ್ಟ ಮಾತನ್ನು ತಪ್ಪುವುದು ಇನ್ನು ಮುಂದೆ ಅಷ್ಟು ಸುಲಭವಲ್ಲ ಎಂಬುದನ್ನು ಅಮೆರಿಕ ಇನ್ನೂ ಕಲಿತಿಲ್ಲ. ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಕೆಣಕಿದರೆ, ಪೆಟ್ಟು ತಿನ್ನುತ್ತೀರಿʼ ಎಂದು ತೀಕ್ಷ್ಣವಾಗಿ ಹೇಳಿದ್ದರು.
ʼಅರ್ಥವಿಲ್ಲದ ಪ್ರಯತ್ನಗಳನ್ನು ಮಾಡಬೇಡಿ. ಹೀಗೆಯೇ ಮುಂದುವರಿದರೆ ಇನ್ನಷ್ಟು ಕೆಳಗೆ ಬೀಳುತ್ತೀರಿ. ಹೊರ್ಮುಜ್ ಜಲಸಂಧಿಯು ಇರಾನ್ ಒಪ್ಪಂದಗಳಿಗೆ ಅನುಗುಣವಾಗಿ ತೆರೆಯುತ್ತದೆಯೇ ಹೊರತು, ಅಮೆರಿಕದ ಬೆದರಿಕೆಗಳಿಗೆ ತಕ್ಕಂತೆ ಅಲ್ಲʼ ಎಂದು ಸ್ಪಷ್ಟಪಡಿಸಿದ್ದರು.
ಪ್ರತೀಕಾರ, ಸರ್ವನಾಶದ ಮಾತು
ಇರಾನ್ ಸರ್ವೋಚ್ಚ ನಾಯಕರಾಗಿದ್ದ ಅಯಾತೊಲ್ಲಾ ಅಲಿ ಖಮೇನಿ ಅಂತ್ಯ ಸಂಸ್ಕಾರದ ವೇಳೆ ಇರಾನ್‌ನಾದ್ಯಂತ ಪ್ರತೀಕಾರದ ಘೋಷಣೆಗಳು ಮೊಳಗಿವೆ. ಅಲಿ ಖಮೇನಿಯ ಉತ್ತರಾಧಿಕಾರಿಯಾಗಿರುವ ಅವರ ಮಗ ಮೊಜ್ತಬಾ ಖಮೇನಿಯೂ ಅದನ್ನೇ ಹೇಳಿದ್ದಾರೆ. ʼಪ್ರತೀಕಾರ ರಾಷ್ಟ್ರದ ಇಚ್ಛೆಯಾಗಿದೆ. ಖಂಡಿತವಾಗಿ ಇದನ್ನು ನೆರವೇರಿಸಬೇಕು. ಹುತಾತ್ಮ ನಾಯಕನ ರಕ್ತಕ್ಕೆ ಮತ್ತು ರಾಷ್ಟ್ರದ ಎಲ್ಲ ಹುತಾತ್ಮರಿಗಾಗಿ ಕೊಲೆಗಾರರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾವು ಪ್ರತಿಜ್ಞೆ ಮಾಡುತ್ತಿದ್ದೇವೆʼ ಎಂದಿದ್ದಾರೆ.
ಏತನ್ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಇರಾನ್ ಸಂಚು ರೂಪಿಸುತ್ತಿದೆ ಎಂದು ಇಸ್ರೇಲ್ ಗುಪ್ತಚರ ಮೂಲಗಳು ತಿಳಿಸಿವೆ. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಟ್ರಂಪ್, ʼಸಾವಿರ ಕ್ಷಿಪಣಿಗಳು ಇರಾನ್‌ನತ್ತ ಗುರಿ ಇಟ್ಟಿವೆ. ನನ್ನ ಹತ್ಯೆಗೆ ಪ್ರಯತ್ನ ಮಾಡಿದರೆ ಇರಾನ್ ಸರ್ವನಾಶವಾಗುತ್ತದೆʼ ಎಂದು ಎಚ್ಚರಿಸಿದ್ದಾರೆ.

