ಕಾನ್ಪುರ/ಚೆನ್ನೈ: ಹೊಸದಾಗಿ ಆರಂಭಿಸಿದ ಕೋರ್ಸ್‌ಗೆ ಪ್ರವೇಶ ಸಿಗಲಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾದ ಐಐಟಿ ಕಾನ್ಪುರ ಮತ್ತು ಐಐಟಿ ಮದ್ರಾಸ್‌ನ ಅಧಿಕೃತ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ ಘಟನೆ ಬೆಳಕಿಗೆ ಬಂದಿದೆ.
ಇತ್ತ ಅಪರಾಧ ಎಸಗಿದ ವಿದ್ಯಾರ್ಥಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬದಲು, ಆತನ ತಾಂತ್ರಿಕ ಪ್ರತಿಭೆಯನ್ನು ಪರಿಗಣಿಸಿ ಮತ್ತೊಂದು ಅವಕಾಶ ನೀಡಲು ಐಐಟಿ ಕಾನ್ಪುರ ಚಿಂತನೆ ನಡೆಸುತ್ತಿದೆ ಎಂದು 'ಎನ್‌ಡಿಡಿವಿ' ವರದಿ ಮಾಡಿದೆ.
ಏನಿದು ಪ್ರಕರಣ
ಐಐಟಿ ಕಾನ್ಪುರ ಮತ್ತು ಐಐಟಿ ಮದ್ರಾಸ್ ಜಂಟಿಯಾಗಿ 'ಸೈಬರ್ ಸೆಕ್ಯೂರಿಟಿ' ಎಂಬ ಹೊಸ ಕೋರ್ಸ್‌ವೊಂದನ್ನು ಆರಂಭಿಸಿದ್ದವು. ಈ ಕೋರ್ಸ್ ಪ್ರವೇಶಕ್ಕೆ ವಿದ್ಯಾರ್ಥಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಆತ, ತಕ್ಷಣವೇ ಎರಡೂ ಐಐಟಿಗಳ ಅಧಿಕೃತ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡಿದ್ದಾನೆ.
ಹ್ಯಾಕ್ ಮಾಡಿದ ಬಳಿಕ ವೆಬ್‌ಸೈಟ್‌ನ ಮುಖಪುಟದಲ್ಲಿ, 'ನನಗೆ ಬೇಕಿರುವುದು ಒಂದೇ ಒಂದು ನ್ಯಾಯಯುತ ಅವಕಾಶ' ಎಂಬ ಸಂದೇಶವನ್ನು ಬರೆದು ತನ್ನ ಆಕ್ರೋಶ ಹೊರಹಾಕಿದ್ದ. ತಕ್ಷಣವೇ ಎಚ್ಚೆತ್ತ ತಾಂತ್ರಿಕ ಸಿಬ್ಬಂದಿ ದೋಷ ಸರಿಪಡಿಸಿದ್ದು , ಘಟನೆಯ ತನಿಖೆ ಆರಂಭಿಸಿದ್ದಾರೆ.
ಈ ವಿದ್ಯಾರ್ಥಿಯ ಹೆಸರು ಅಥವಾ ಹೆಚ್ಚಿನ ವಿವರಗಳನ್ನು ಐಐಟಿ ಆಡಳಿತ ಮಂಡಳಿ ಬಹಿರಂಗಪಡಿಸಿಲ್ಲ.
ಎಫ್‌ಐಆರ್ ಬದಲು 2ನೇ ಅವಕಾಶ
ಸಂಸ್ಥೆಯ ಅನುಮತಿಯಿಲ್ಲದೆ ಡಿಜಿಟಲ್ ವ್ಯವಸ್ಥೆಯನ್ನು ಪ್ರವೇಶಿಸುವುದು ಅಥವಾ ವೆಬ್‌ಸೈಟ್ ಹ್ಯಾಕ್ ಮಾಡುವುದು ಸೈಬರ್ ಕಾಯ್ದೆಯಡಿ ಅಪರಾಧ. ಆರಂಭದಲ್ಲಿ ಕಾನ್ಪುರ ಐಐಟಿ ಆಡಳಿತ ಮಂಡಳಿಯು ಕಾನೂನು ಕ್ರಮಕ್ಕೆ ಮುಂದಾಗಿತ್ತಾದರೂ, ವಿದ್ಯಾರ್ಥಿಯ ಭವಿಷ್ಯ ಮತ್ತು ಆತನ ತಾಂತ್ರಿಕ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಎಫ್‌ಐಆರ್ ದಾಖಲಿಸುವ ಬದಲು ಮತ್ತೊಂದು ಅವಕಾಶ ನೀಡುವ ಬಗ್ಗೆ ಯೋಚಿಸುತ್ತಿದೆ ಎಂದು ವರದಿಯಾಗಿದೆ. ಆದರೆ ಈ ಅವಕಾಶವು ನೇರ ಪ್ರವೇಶವೇ ಅಥವಾ ಮರುಪರೀಕ್ಷೆಯ ಮೂಲಕವೇ ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಚರ್ಚೆಗೆ ಕಾರಣವಾದ 'ಎಥಿಕಲ್ ಹ್ಯಾಕಿಂಗ್'
ಈ ಘಟನೆಯು ದೇಶದಾದ್ಯಂತ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಸೈಬರ್ ಸೆಕ್ಯೂರಿಟಿ ತಜ್ಞರಿಗೆ ಡಿಜಿಟಲ್ ವ್ಯವಸ್ಥೆಯಲ್ಲಿರುವ ಕುಂದುಕೊರತೆಗಳು ಹಾಗೂ ಭದ್ರತಾ ಲೋಪಗಳನ್ನು ಪತ್ತೆಹಚ್ಚಿ, ಸಂಸ್ಥೆಗಳನ್ನು ರಕ್ಷಿಸುವ ತರಬೇತಿ ನೀಡಲಾಗುತ್ತದೆ. ಆದರೆ 'ಎಥಿಕಲ್ ಹ್ಯಾಕಿಂಗ್' (ಅನುಮತಿ ಪಡೆದು ಮಾಡುವ ಹ್ಯಾಕಿಂಗ್) ಅನ್ನು ಯಾವಾಗಲೂ ಸಂಬಂಧಪಟ್ಟ ಸಂಸ್ಥೆಯ ಸಂಪೂರ್ಣ ಪೂರ್ವಾನುಮತಿಯಿಂದ ಮಾತ್ರ ಮಾಡಲಾಗುತ್ತದೆ.
ವ್ಯವಸ್ಥೆಯಲ್ಲಿರುವ ದೋಷವನ್ನು ಎತ್ತಿ ತೋರಿಸಲು ಅಥವಾ ಗಮನ ಸೆಳೆಯಲು ಮಾಡಿದರೂ ಸಹ, ಯಾವುದೇ ಸಂಸ್ಥೆಯ ಅನುಮತಿಯಿಲ್ಲದೆ ವೆಬ್‌ಸೈಟ್ ಅಥವಾ ಕಂಪ್ಯೂಟರ್ ಸಿಸ್ಟಮ್‌ಗಳನ್ನು ಪ್ರವೇಶಿಸುವುದು 'ಎಥಿಕಲ್ ಹ್ಯಾಕಿಂಗ್' ಎನಿಸಿಕೊಳ್ಳುವುದಿಲ್ಲ. ಅದು ಕಾನೂನುಬಾಹಿರ.
ಹಾಗಾಗಿ, ಈ ಘಟನೆಯು ತಾಂತ್ರಿಕ ಕೌಶಲ್ಯ ಮತ್ತು ನೈತಿಕತೆ ( ಕೌಶಲ್ಯವನ್ನು ಪ್ರದರ್ಶಿಸಲು ಹಿಡಿದ ಹಾದಿ) ನಡುವಿನ ವ್ಯತ್ಯಾಸದ ಕುರಿತು ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.
ಜತೆಗೆ ಭಾರತದಲ್ಲಿ ಸೈಬರ್ ಸೆಕ್ಯೂರಿಟಿ ಶಿಕ್ಷಣದ ಅಗತ್ಯತೆ ಹೆಚ್ಚುತ್ತಿರುವುದನ್ನು ಮತ್ತು ನೈತಿಕತೆಯ ಎಲ್ಲೆಯನ್ನು ದಾಟುವ ಪ್ರತಿಭಾವಂತ ಯುವಕರನ್ನು ಸರಿದಾರಿಗೆ ತರುವಲ್ಲಿ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಈ ಘಟನೆ ಎತ್ತಿ ತೋರಿಸುತ್ತಿದೆ.

