ಠಾಣೆ: ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಭಿವಂಡಿ ನಗರದಲ್ಲಿ ಗುರುವಾರ ತಡರಾತ್ರಿ 4 ಅಂತಸ್ತಿನ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ಕನಿಷ್ಠ 8 ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ಅವಶೇಷಗಳಡಿ ಇನ್ನೂ 6 ರಿಂದ 7 ಮಂದಿ ಸಿಲುಕಿರುವ ಶಂಕೆಯಿದ್ದು ರಕ್ಷಣಾ ಕಾರ್ಯ ಮುಂದುವರಿದಿದೆ.
ಭಿವಂಡಿಯ ಬಾಲಾಜಿ ನಗರದಲ್ಲಿರುವ 'ಕೋಹಿನೂರ್' ಎಂಬ ಕಟ್ಟಡದ ಒಂದು ಭಾಗವು ಗುರುವಾರ ರಾತ್ರಿ ಸುಮಾರು 11.30 ಕ್ಕೆ ಏಕಾಏಕಿ ಕುಸಿದುಬಿದ್ದಿದೆ.
ಘಟನೆಯಲ್ಲಿ 8 ಜನರು ಮೃತಪಟ್ಟಿದ್ದಾರೆ. ಒಬ್ಬರನ್ನು ಹೊರತುಪಡಿಸಿ ಉಳಿದವರ ಗುರುತು ಇನ್ನೂ ಪತ್ತೆಯಾಗಿಲ್ಲ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಕಟ್ಟಡದಲ್ಲಿ ಒಟ್ಟು 48 ಕೊಠಡಿಗಳಿದ್ದವು (ಪ್ರತಿ ಮಹಡಿಯಲ್ಲಿ 12 ಕೊಠಡಿಗಳು). ಇದು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ನಗರಸಭೆ ಈಗಾಗಲೇ ತಿಳಿಸಿತ್ತು. ಕಟ್ಟಡದಲ್ಲಿ ದುರಸ್ತಿ ಕೆಲಸ ನಡೆಯುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಗುರುವಾರ ರಾತ್ರಿ ಸುಮಾರು 9 ಗಂಟೆಯ ವೇಳೆಗೆ ಕಟ್ಟಡದಿಂದ ಜೋರಾದ ಶಬ್ದ ಕೇಳಿಸತೊಡಗಿತು. ಅಪಾಯವನ್ನು ಅರಿತ ಸ್ಥಳೀಯರು ತಕ್ಷಣವೇ ಅಲ್ಲಿದ್ದ ಹಲವು ಕುಟುಂಬಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ಆದರೆ, ಇನ್ನು ಕೆಲವರು ಹೊರಬರುತ್ತಿದ್ದಂತೆಯೇ ಕಟ್ಟಡದ ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ.
ಸ್ಥಳದಲ್ಲಿ ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ಪಡೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

