ಮುಂಬೈ: ಶುದ್ಧ ಹಾಲಿಗೆ ಕೃತಕ ಹಾಲನ್ನು ಮಿಶ್ರಣ ಮಾಡಿ ಮಾರಾಟ ಮಾಡುತ್ತಿದ್ದ ಜಾಲವೊಂದು ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಭೂಮ್ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಹಾಲು ಕಲಬೆರಕೆ ಪ್ರಕರಣದ ಕುರಿತು ಪೊಲೀಸ್ ಮತ್ತು ಆಹಾರ ಹಾಗೂ ಔಷಧ ಆಡಳಿತ ಇಲಾಖೆ ನಡೆಸಿದ ಜಂಟಿ ತನಿಖೆಯಿಂದ ಬೆಳಕಿಗೆ ಬಂದಿರುವ ಪ್ರಕರಣವು, ಆರೋಪಿಗಳು ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್ ಮತ್ತು ಅತ್ಯಂತ ಕಳಪೆ ಗುಣಮಟ್ಟದ ರಾಸಾಯನಿಕ ಪುಡಿಯನ್ನು ಬಳಸಿ ಕಲಬೆರಕೆ ಮಾಡುತ್ತಿದ್ದರು ಎಂಬುವುದನ್ನು ಗುರುತಿಸಿದೆ ಎಂದು ಓಆಖಿಗಿ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಪೊಲೀಸರು ಏಳು ಜನರ ವಿರುದ್ಧ ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಪ್ರಕರಣ ದಾಖಲಾಗಿ ಎಂಟು ದಿನಗಳು ಕಳೆದರೂ ಎಲ್ಲಾ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಮಾರಾಟದ ರಿಜಿಸ್ಟರ್ ಗಳನ್ನು ವಿಶ್ಲೇಷಿಸಿದಾಗ, ಕಳೆದ ಆರು ತಿಂಗಳಲ್ಲಿ ಕಲಬೆರಕೆಗಾಗಿ ಅಂದಾಜು 2,30,470 ಕಿಲೋಗ್ರಾಂಗಳಷ್ಟು ಅತ್ಯಂತ ಕಳಪೆ ಗುಣಮಟ್ಟದ ಹಾಲಿನ ಪುಡಿಯನ್ನು ಬಳಸಲಾಗಿದೆ. ಇಷ್ಟೊಂದು ಬೃಹತ್ ಪ್ರಮಾಣದ ಹಾಲಿನ ಪುಡಿಯನ್ನು ಬಳಸಿ ಸುಮಾರು 23,04,070 ಲೀಟರ್ ಕೃತಕ ಹಾಲನ್ನು ತಯಾರಿಸಲಾಗಿದ್ದು, ಇದರ ಮೌಲ್ಯ 9 ಕೋಟಿ 21 ಲಕ್ಷ 62 ಸಾವಿರ 800 ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಆರೋಪಿಗಳು ಪ್ರತಿ 100 ಲೀಟರ್ ಶುದ್ಧ ಹಾಲಿಗೆ 10 ಲೀಟರ್ ಕೃತಕ ಹಾಲನ್ನು ಮಿಶ್ರಣ ಮಾಡುತ್ತಿದ್ದರು. ಅಂದರೆ ಒಟ್ಟು ಹಾಲಿನಲ್ಲಿ ಶೇಕಡಾ 10 ರಷ್ಟು ಕಲಬೆರಕೆ ಪ್ರಮಾಣ ಇರುತ್ತಿತ್ತು ಎಂದು ಹೇಳಲಾಗಿದೆ. ಈ ಶೇಕಡಾ 10 ರ ಅನುಪಾತದ ಆಧಾರದಲ್ಲಿ, ಭೂಮ್ ಪ್ರದೇಶದ ಹಾಲು ಸಂಗ್ರಹಣಾ ಕೇಂದ್ರಗಳಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಒಟ್ಟು 2.3 ಕೋಟಿಗೂ ಹೆಚ್ಚು ಲೀಟರ್ ಕಲಬೆರಕೆ ಹಾಲನ್ನು ಸರಬರಾಜು ಮಾಡಲಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಈ ಕೃತಕ ಹಾಲು ಅಸಲಿ ಹಾಲಿನಂತೆ ಕಾಣುವಂತೆ ಮಾಡಲು ಮತ್ತು ಅದರಲ್ಲಿ ಅಗತ್ಯವಿರುವ ಕೊಬ್ಬಿನಾಂಶದ ಮಟ್ಟವನ್ನು ಕಾಯ್ದುಕೊಳ್ಳಲು, ಆರೋಪಿಗಳು ಡಿಟರ್ಜೆಂಟ್ ಪೌಡರ್, ಪಾಮ್ ಆಯಿಲ್ ಮತ್ತು ಅತ್ಯಂತ ಕಳಪೆ ಗುಣಮಟ್ಟದ ರಾಸಾಯನಿಕ ಪುಡಿಯನ್ನು ಬಳಸುತ್ತಿದ್ದರು ಎಂದು ಆರೋಪಿಸಲಾಗಿದೆ.
ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಶಂಕಿತ ಅಡಗುದಾಣಗಳ ಮೇಲೆ ಸರಣಿ ದಾಳಿಗಳನ್ನು ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಓಆಖಿಗಿ ಗೆ ಮಾಹಿತಿ ನೀಡಿದ ಭೂಮ್ನ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಗಣೇಶ್ ಕಾನಗುಡೆ, "ದಾಳಿಯ ಸಂದರ್ಭದಲ್ಲಿ ಅಧಿಕಾರಿಗಳು 61 ಚೀಲ ಕಲಬೆರಕೆ ಹಾಲಿನ ಪುಡಿಯನ್ನು ವಶಪಡಿಸಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಿಂದ ಬಾಲಾಸಾಹೇಬ್ ಗೋಡ್ಗೆ ಎಂಬಾತ ಕಲಬೆರಕೆ ಹಾಲು ತಯಾರಿಸಲು ಭೂಮ್ ಪ್ರದೇಶದ ಹಲವು ಡೈರಿ ಘಟಕಗಳಿಗೆ ಈ ಕಲಬೆರಕೆ ಹಾಲಿನ ಪುಡಿಯನ್ನು ಸರಬರಾಜು ಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಈ ದಂಧೆಯಲ್ಲಿ ಹಲವು ಹಾಲು ಸಂಗ್ರಹಣಾ ಕೇಂದ್ರಗಳು ಭಾಗಿಯಾಗಿರುವುದು ಕೂಡ ತನಿಖೆಯಿಂದ ಬೆಳಕಿಗೆ ಬಂದಿದೆ. ಆದರೆ, ಈ ಪುಡಿಯನ್ನು ಬಳಸಿ ತಯಾರಿಸಲಾದ ಸಾವಿರಾರು ಲೀಟರ್ ಕಲಬೆರಕೆ ಹಾಲನ್ನು ಖರೀದಿಸಿದವರನ್ನು ಇನ್ನು ಗುರುತಿಸಬೇಕಾಗಿದೆ ಮತ್ತು ಬಂಧಿಸಬೇಕಾಗಿದೆ. ದನಗಳ ಮೇವು ಮಾರಾಟ ಮಾಡುವ ನೆಪದಲ್ಲಿ ಈ ದಂಧೆಯನ್ನು ನಡೆಸಲಾಗುತ್ತಿತ್ತು" ಎಂದು ತಿಳಿಸಿದ್ದಾರೆ.
ಭೂಮ್ ತಾಲೂಕು ಪ್ರತಿದಿನ ಲಕ್ಷಾಂತರ ಲೀಟರ್ ಹಾಲನ್ನು ರಫ್ತು ಮಾಡುತ್ತದೆ ಮತ್ತು ಸುಮಾರು 70 ರಿಂದ 80 ಟನ್ ಖೋವಾವನ್ನು ಉತ್ಪಾದಿಸುತ್ತದೆ. ಹಾಗಾಗಿ ಈ ಪ್ರಕರಣವು ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.
ಡಿಟರ್ಜೆಂಟ್ ಮತ್ತು ಪಾಮ್ ಆಯಿಲ್ ಒಳಗೊಂಡಿರುವ ಇಂತಹ ರಾಸಾಯನಿಕಯುಕ್ತ ಹಾಲನ್ನು ನಿರಂತರವಾಗಿ ಸೇವಿಸುವುದರಿಂದ ಲಿವರ್, ಕಿಡ್ನಿ ಮತ್ತು ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹಾನಿಗೊಳಗಾಗಬಹುದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ. ಇದು ಮಕ್ಕಳು, ಗರ್ಭಿಣಿಯರು ಮತ್ತು ವೃದ್ಧರ ಜೀವಕ್ಕೆ ಮಾರಕವಾಗಿ ಪರಿಣಮಿಸಬಹುದು.
ಆಹಾರ ಸುರಕ್ಷತೆ ಕಾಯ್ದೆಯಡಿ, ಹಾಲಿನಲ್ಲಿ ಇಂತಹ ಜೀವಕ್ಕೆ ಕಂಟಕ ತರುವಂತಹ ಕಲಬೆರಕೆ ಮಾಡುವ ಅಪರಾಧ ಎಸಗಿದವರಿಗೆ 10 ಲಕ್ಷ ರೂಪಾಯಿಗಳವರೆಗೆ ದಂಡ ಮತ್ತು ಜೀವಾವಧಿ ಜೈಲು ಶಿಕ್ಷೆ ಸೇರಿದಂತೆ ಕಠಿಣ ಶಿಕ್ಷೆಗಳನ್ನು ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

