ನವದೆಹಲಿ: ಅಯೋಧ್ಯೆ ದೇಣಿಗೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಈ ಹಗರಣದಲ್ಲಿ ದೇಗುಲದ ನೌಕರರು ಮಾತ್ರವಲ್ಲದೇ ದೊಡ್ಡ ತಲೆಗಳ ಕೈವಾಡವಿರುವುದರಿಂದ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಉತ್ತರ ಪ್ರದೇಶ ಸರ್ಕಾರ ನೇಮಕ ಮಾಡಿರುವ ವಿಶೇಷ ತನಿಖಾ ತಂಡವು ಕೇವಲ ಕಣ್ಣೊರೆಸುವ ತಂತ್ರದಂತೆ ಕಾಣುತ್ತಿದೆ. ಈ ಹಗರಣದಲ್ಲಿ ಭಾಗಿಯಾಗಿರುವ ರಾಜಕೀಯ ಮತ್ತು ಸಾಂಸ್ಥಿಕ ಪ್ರಭಾವ ಹೊಂದಿರುವವರನ್ನು ತನಿಖೆಗೆ ಒಳಪಡಿಸಲು ಬೇಕಾದ ಸಾಮರ್ಥ್ಯ ಮತ್ತು ಸ್ವಾತಂತ್ರ್ಯ ಎಸ್‌ಐಟಿಗೆ ಇಲ್ಲ ಎಂದು ವಾದಿಸಿದ್ದಾರೆ. ದೊಡ್ಡ ವ್ಯಕ್ತಿಗಳ ರಕ್ಷಣೆಗಾಗಿ ಉಳಿದಿರುವ ಸಾಕ್ಷ್ಯಗಳನ್ನು ನಾಶ ಮಾಡುವ ಆತಂಕವಿದೆ ಎಂದು ತಿಳಿಸಿದ್ದಾರೆ.
'ಈ ವಂಚನೆಯ ಗಾತ್ರವು ನೂರಾರು ಕೋಟಿಗಳಷ್ಟಿದೆ. ಇದು ಹಿಂದೂ ಧರ್ಮ, ಹಿಂದೂಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ತಾರತಮ್ಯ ರಹಿತವಾಗಿ ತನಿಖೆ ನಡೆಸುವ ಬದಲು ಸಾಕ್ಷ್ಯಗಳ ನಾಶದ ಯತ್ನ ನಡೆಯುತ್ತಿದೆ. ಇದು ರಾಮನ ಭಕ್ತರು ಮತ್ತು ರಾಮನ ಮೌಲ್ಯಗಳಿಗೆ ಮಾಡಿದ ದೊಡ್ಡ ಅನ್ಯಾಯವಾಗಿದೆ' ಎಂದು ವೇಣುಗೋಪಾಲ್ ಹೇಳಿದ್ದಾರೆ.
ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷರೂ ಆಗಿರುವ ಕೆ.ಸಿ. ವೇಣುಗೋಪಾಲ್, ಸರ್ಕಾರ ರಚಿಸಿರುವ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮೂಗಿನಡಿಯಲ್ಲೇ ಅತ್ಯಂತ ಸಂಘಟಿತ ಹಗರಣ ನಡೆಯುತ್ತಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಕ್ರಿಮಿನಲ್ ಚಟುವಟಿಕೆಗಳ ಬಗ್ಗೆ ಸಾಕ್ಷ್ಯ ಸಿಗದಂತೆ ಮಾಡಲು 7-8 ತಿಂಗಳ ಸಿಸಿಟಿವಿ ದೃಶ್ಯಾವಳಿಯನ್ನು ಅಳಿಸಲಾಗಿದೆ ಎಂದೂ ದೂರಿದ್ದಾರೆ.
'ರಾಮ ಮಂದಿರಕ್ಕೆ ನೀಡಿದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಲೆಕ್ಕ ತೋರಿಸದೇ ಕಸಿದುಕೊಳ್ಳಲಾಗುತ್ತಿದೆ ಎಂದು 2021ರಲ್ಲಿ ಟ್ರಸ್ಟ್‌ನ ಮುಖ್ಯ ಲೆಕ್ಕಾಧಿಕಾರಿ ಎಚ್ಚರಿಸಿದ್ದರು. ಬಳಿಕ, ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಇತ್ತೀಚೆಗೆ, ದೇಣಿಗೆ ಎಣಿಕೆಯ ಅಕ್ರಮಗಳನ್ನು ಗುರುತಿಸಿದ್ದ ಎಸ್‌ಬಿಐ, ಕೆಲ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಲು ಸೂಚಿಸಿತ್ತು. ಲೆಕ್ಕಾಧಿಕಾರಿ ಸೇರಿದಂತೆ ಎಲ್ಲ ಎಚ್ಚರಿಕೆಗಳನ್ನು ಸಹ ನಿರ್ಲಕ್ಷಿಸಲಾಗಿದೆ. ಒಟ್ಟಾರೆಯಾಗಿ, ಈ ಪ್ರಸಂಗಗಳು ಭಗವಾನ್ ರಾಮನ ಹೆಸರಿನಲ್ಲಿ ಸಂಗ್ರಹಿಸಿದ ದೇಣಿಗೆಗಳನ್ನು ರಕ್ಷಿಸುವಲ್ಲಿ ಉದ್ದೇಶಪೂರ್ವಕ ಉದಾಸೀನತೆಯ ಮಾದರಿಯನ್ನು ಬಹಿರಂಗಪಡಿಸಿವೆ. ದೇಣಿಗೆ ರಕ್ಷಿಸುವ ಮತ್ತು ಭಗವಾನ್ ರಾಮನ ಹೆಸರಿನಲ್ಲಿ ಸ್ಥಾಪಿಸಲಾದ ಸಂಸ್ಥೆಯ ಪಾವಿತ್ರ್ಯವನ್ನು ಕಾಪಾಡುವ ಮೂಲಕ 1.4 ಶತಕೋಟಿಗೂ ಹೆಚ್ಚು ಭಾರತೀಯರ ನಂಬಿಕೆಯನ್ನು ಪುನಃಸ್ಥಾಪಿಸುವುದು ಸರ್ಕಾರದ ಮತ್ತು ಅದರ ಮುಖ್ಯಸ್ಥರಾಗಿ ನಿಮ್ಮ ನೈತಿಕ ಜವಾಬ್ದಾರಿಯಾಗಿದೆ'ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಇದರ ಜೊತೆಗೆ, ಎಎಪಿ ವರಿಷ್ಠ ಅರವಿಂದ ಕೇಜ್ರಿವಾಲ್ ಸಹ ಮೋದಿ ವಿರುದ್ಧ ಮುಗಿಬಿದ್ದಿದ್ದು, ದೇಣಿಗೆ ಅಕ್ರಮದಲ್ಲಿ ಭಾಗಿಯಾದವರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಗುಪ್ತಚರ ಮಾಹಿತಿ ಪಡೆಯುವ ಪ್ರಧಾನಿಗೆ ಈ ಲೂಟಿಯ ಬಗ್ಗೆ ತಿಳಿದೇ ಇರುತ್ತದೆ ಎಂದು ದೂರಿದ್ದಾರೆ.

