ವರ್ಷಗಳಿಂದ ಅಭಿವೃದ್ಧಿ ಮತ್ತು ಪರೀಕ್ಷೆಗಳನ್ನು ನಡೆಸಿದ ಮೇಲೆ ನಾಸಾದ ನ್ಯಾನ್ಸಿ ಗ್ರೇಸ್ ರೋಮನ್ ಬಾಹ್ಯಾಕಾಶ ಟೆಲಿಸ್ಕೋಪ್ ಅಂತಿಮವಾಗಿ ಭೂಮಿಯನ್ನು ತೊರೆಯಲು ಸಿದ್ಧವಾಗುತ್ತಿದೆ.
ಈ ಪ್ರಬಲವಾದ ಅಬ್ಸರ್ವೇಟರಿಯನ್ನು ಆಗಸ್ಟ್ 30ರಂದು ಸ್ಪೇಸ್‌ಎಕ್ಸ್ ಫಾಲ್ಕನ್ ಹೆವಿ ರಾಕೆಟ್‌ನಿಂದ ಉಡಾವಣೆ ಮಾಡಲಾಗುತ್ತಿದೆ. ಈ ಟೆಲಿಸ್ಕೋಪ್ ವಿಜ್ಞಾನಿಗಳಿಗೆ ಬ್ರಹ್ಮಾಂಡದ ವಿಶಾಲ ನೋಟವನ್ನು ನೀಡಲು ವಿನ್ಯಾಸಗೊಳಿಸಲಾದ ಮಿಶನ್ ಅನ್ನು ಪ್ರಾರಂಭಿಸಲಿದೆ.
ಟೆಲಿಸ್ಕೋಪ್ ಯಾವಾಗ ಉಡಾಯಿಸಲಾಗುತ್ತದೆ?
ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಲಾಂಚ್ ಕಾಂಪ್ಕೆಕ್ಸ್ 39A ನಿಂದ ಭಾರತೀಯ ಕಾಲಮಾನ ಸಂಜೆ 4:56ಕ್ಕೆ ಉಡಾವಣೆಯನ್ನು ಯೋಜಿಸಲಾಗಿದೆ. ನಾಸಾ ಮತ್ತು ಸ್ಪೇಸ್ ಎಕ್ಸ್ ತಮ್ಮ ಉಡಾವಣಾ ಸಿದ್ಧತೆ ವಿಮರ್ಶೆಯನ್ನು ಪೂರ್ಣಗೊಳಿಸಿದ ನಂತರ ಈ ಮಿಷನ್‌ಗೆ ಅಂತಿಮ ಸುತ್ತಿನ ಹಾರಾಟದ ಅನುಮತಿ ದೊರೆಯಲಿದೆ. ಹಾಗಿದ್ದರೂ ಸಮಯವು ಉಡಾವಣಾ ದಿನದ ಪರಿಸ್ಥಿತಿಗಳಿಗೆ ಒಳಪಟ್ಟಿರುತ್ತದೆ.
ರೋಮನ್ ವಿಶ್ವದ ಅತ್ಯಂತ ಶಕ್ತಿಶಾಲಿ ಕಾರ್ಯನಿರ್ವಹಣಾ ರಾಕೆಟ್‌ಗಳಲ್ಲಿ ಒಂದಾದ ಸ್ಪೇಸ್‌ಎಕ್ಸ್ ಫಾಲ್ಕನ್ ಹೆವಿಯಲ್ಲಿ ಬಾಹ್ಯಾಕಾಶಕ್ಕೆ ಹಾರಾಟ ನಡೆಸಲಿದೆ. ಟೆಲಿಸ್ಕೋಪ್ ಅನ್ನು ಇತ್ತೀಚೆಗೆ ರಾಕೆಟ್‌ನೊಂದಿಗೆ ಇಂಟೆಗ್ರೇಶನ್ ಆಗುವ ಮೊದಲು ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿರುವ ಸ್ಪೇಸ್‌ಎಕ್ಸ್ ಹ್ಯಾಂಗರ್‌ಗೆ ಅದರ ಪ್ರೊಟೆಕ್ಟಿವ್ ಪೇಲೋಡ್ ಫೇರಿಂಗ್‌ನೊಳಗೆ ಸ್ಥಳಾಂತರಿಸಲಾಗಿದೆ.
ರೋಮನ್ ತನ್ನ ಹಿಂದಿನ ವೇಳಾಪಟ್ಟಿಗಿಂತ ಸುಮಾರು ಒಂಬತ್ತು ತಿಂಗಳು ಮುಂಚಿತವಾಗಿ ಉಡಾವಣೆಗೊಳ್ಳುತ್ತಿದೆ ಎನ್ನುವುದಕ್ಕಾಗಿ ಉಡಾವಣೆಯು ವಿಶೇಷವಾಗಿ ಗಮನಾರ್ಹವೆನಿಸಿದೆ. ರಾಕೆಟ್‌ನಿಂದ ಬೇರ್ಪಟ್ಟ ಮೇಲೆ ಭೂಮಿಯಿಂದ ಸುಮಾರು 16 ಲಕ್ಷ ಕಿಮೀ ದೂರದಲ್ಲಿರುವ ಎರಡನೇ ಸೂರ್ಯ-ಭೂಮಿ ಲ್ಯಾಗ್ರೇಂಜ್ ಬಿಂದು ಅಥವಾ L2 ಗೆ ಪ್ರಯಾಣ ಪ್ರಾರಂಭಿಸುತ್ತದೆ. ಅಲ್ಲಿ ಬ್ರಹ್ಮಾಂಡದ ವಿಶಾಲವಾದ ಅಡೆತಡೆಯಿಲ್ಲದ ನೋಟವನ್ನು ಹೊಂದಿರುತ್ತದೆ.
ನ್ಯಾನ್ಸಿ ಗ್ರೇಸ್ ರೋಮನ್ ಟೆಲಿಸ್ಕೋಪ್ ಏನು ಮಾಡುತ್ತದೆ?
ರೋಮನ್ ಕೇವಲ ಅದ್ಭುತ ಚಿತ್ರಗಳನ್ನು ತೆಗೆದುಕೊಳ್ಳಲು ಮಾತ್ರ ವಿನ್ಯಾಸಗೊಳಿಸಿದ ಟೆಲಿಸ್ಕೋಪ್ ಆಗಿರುವುದಿಲ್ಲ. ಇದರ ಅಗಾಧವಾದ ವೀಕ್ಷಣಾ ಕ್ಷೇತ್ರ ಅತಿದೊಡ್ಡ ಅವಕಾಶವಾಗಿರುತ್ತದೆ. ಏಕೆಂದರೆ ಇದರ 2.4 ಮೀಟರ್ ಪ್ರಾಥಮಿಕ ಕನ್ನಡಿ ಗಾತ್ರದಲ್ಲಿ ಹಬಲ್ ಟೆಲಿಸ್ಕೋಪ್‌ನಂತೆಯೇ ಇರುತ್ತದೆ. ಆದರೆ ಇದರ ವೈಡ್ ಫೀಲ್ಡ್ ಇನ್‌ಸ್ಟ್ರುಮೆಂಟ್ ಹಬಲ್‌ನ ವೀಕ್ಷಣಾ ಕ್ಷೇತ್ರಕ್ಕೆ ಹೋಲಿಸಿದಲ್ಲಿ ಕನಿಷ್ಠ 100 ಪಟ್ಟು ದೊಡ್ಡದಾದ ಆಕಾಶದ ಪ್ರದೇಶವನ್ನು ಗಮನಿಸಬಹುದಾಗಿದೆ.
ಅಂದರೆ ರೋಮನ್ ಬ್ರಹ್ಮಾಂಡದ ವಿಸ್ತೃತ ಭಾಗಗಳನ್ನು ಹೆಚ್ಚು ವೇಗವಾಗಿ ಸಮೀಕ್ಷೆ ಮಾಡಬಹುದು. ಗ್ಯಾಲಕ್ಸಿಗಳು ಮತ್ತು ಕಾಸ್ಮಿಕ್ ರಚನೆಗಳ ವಿಶಾಲ ನಕ್ಷೆಯನ್ನು ರಚಿಸಬಹುದು. ಅದರ ಯೋಜಿತ ಐದು ವರ್ಷಗಳ ಪ್ರಾಥಮಿಕ ಕಾರ್ಯನಿರ್ವಹಣೆಯಲ್ಲಿ ರೋಮನ್ ಡಾರ್ಕ್ ಎನರ್ಜಿ ಮತ್ತು ಡಾರ್ಕ್ ಮ್ಯಾಟರ್ ಅನ್ನು ತನಿಖೆ ನಡೆಸುತ್ತದೆ. ಗ್ಯಾಲಕ್ಸಿಗಳು ಹೇಗೆ ವಿಕಸನಗೊಳ್ಳುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತದೆ. ಸೌರವ್ಯೂಹದ ಆಚೆಗೆ ಸಾವಿರಾರು ಗ್ರಹಗಳನ್ನು ಹುಡುಕಲಿದೆ.
ನಕ್ಷತ್ರಗಳ ಪ್ರಜ್ವಲಿಸುವಿಕೆಯನ್ನು ನಿರ್ಬಂಧಿಸುವ ಮೂಲಕ ಸಮೀಪದ ದೈತ್ಯ ಗ್ರಹಗಳನ್ನು ನೇರವಾಗಿ ಚಿತ್ರಿಸಲು ವಿನ್ಯಾಸಗೊಳಿಸಲಾದ ಟೆಕ್ನಾಲಜಿ ಡೆಮಾನ್‌ಸ್ಟ್ರೇಶನ್ (ಹೊಸ ತಂತ್ರಜ್ಞಾನ ಪರೀಕ್ಷೆ) ಆಗಿರುವ ಕೊರೊನಾಗ್ರಾಫ್ ಇನ್‌ಸ್ಟ್ರುಮೆಂಟ್ ಅನ್ನು ಬಳಸಲಿದೆ. ಸರಳವಾಗಿ ಹೇಳುವುದಾದಲ್ಲಿ, ಜೇಮ್ಸ್ ವೆಬ್ ಅನ್ನು ಕಾಸ್ಮಿಕ್ ವಸ್ತುಗಳನ್ನು ಅಸಾಧಾರಣದ ವಿವರಗಳಲ್ಲಿ ಜೂಮ್ ಇನ್ ಮಾಡಿ ಅಧ್ಯಯನ ಮಾಡಲು ನಿರ್ಮಿಸಿದ್ದರೆ, ರೋಮನ್ ಅನ್ನು ಜೂಮ್ ಔಟ್ ಮಾಡಿ ವಿಶಾಲವಾದ ಪ್ರದೇಶವನ್ನು ಸಮೀಕ್ಷೆ ಮಾಡುವಂತೆ ವಿನ್ಯಾಸಗೊಳಿಸಲಾಗಿದೆ.
ಹೀಗಾಗಿ ಎರಡು ಟೆಲಿಸ್ಕೋಪ್‌ಗಳು ಪರಸ್ಪರ ಬದಲಾಯಿಸುವ ಬದಲು ಪೂರಕವಾಗಿರುವುದನ್ನು ನಿರೀಕ್ಷಿಸಲಾಗಿದೆ. ಟೆಲಿಸ್ಕೋಪ್ ಗೆ ನಾಸಾದ ಮೊದಲ ಮುಖ್ಯ ಖಗೋಳಶಾಸ್ತ್ರಜ್ಞೆ ಮತ್ತು ಹಬಲ್‌ಗೆ ಅಡಿಪಾಯ ಹಾಕಲು ನೆರವಾದ ನ್ಯಾನ್ಸಿ ಗ್ರೇಸ್ ರೋಮನ್ ಹೆಸರನ್ನು ಇಡಲಾಗಿದೆ. ನ್ಯಾನ್ಸಿ ಅವರನ್ನು 'ಹಬಲ್‌ನ ತಾಯಿ' ಎನ್ನುವ ಅಡ್ಡಹೆಸರಿನಿಂದ ಕರೆಯಲಾಗುತ್ತಿತ್ತು.

