ನವದೆಹಲಿ: ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರಿಗೆ ನೆರವು ಮತ್ತು ಪರಿಹಾರ ಕಲ್ಪಿಸುವ 'ಪಿಎಂ ಕೇರ್ಸ್' ನಿಧಿಗೆ 2023ರಿಂದ 2025ರವರೆಗೆ ದೇಶ ಮತ್ತು ವಿದೇಶಗಳಿಂದ ₹1,162.92 ಕೋಟಿ ದೇಣಿಗೆ ಹರಿದುಬಂದಿದೆ. ಆದರೆ, ಈ ಅವಧಿಯಲ್ಲಿ ಖರ್ಚು ಮಾಡಿದ್ದು ಕೇವಲ ₹16.47 ಕೋಟಿ ಮಾತ್ರ ಎಂಬುದು ಆಡಿಟ್ ವರದಿಗಳಿಂದ ತಿಳಿದುಬಂದಿದೆ.
2024-25ರಲ್ಲಿ 'ಪಿಎಂ ಕೇರ್ಸ್'ಗೆ ₹479.97 ಕೋಟಿ ಸಂಗ್ರಹವಾಗಿದೆ. ಆದರೆ, ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ₹87.85 ಲಕ್ಷ ಖರ್ಚು ಮಾಡಲಾಗಿದೆ.
2023-24ರಲ್ಲಿ 'ಪಿಎಂ ಕೇರ್ಸ್'ಗೆ ₹682.94 ಕೋಟಿ ಸಂಗ್ರಹವಾಗಿದ್ದು, ₹15.59 ಕೋಟಿ ವೆಚ್ಚ ಮಾಡಲಾಗಿದೆ.
2025ರ ಮಾರ್ಚ್ 31ಕ್ಕೆ ಕೊನೆಗೊಂಡ ವರ್ಷದ 'ಸ್ವೀಕೃತಿ ಮತ್ತು ಪಾವತಿಗಳ ಖಾತೆ'ಯ ಪ್ರಕಾರ, 'ಪಿಎಂ ಕೇರ್ಸ್' ನಿಧಿಯ ಖಾತೆಗಳಲ್ಲಿ ಒಟ್ಟು ₹8,452.06 ಕೋಟಿ ಹಣವಿದೆ. ಇದರಲ್ಲಿ ₹7,846.65 ಕೋಟಿ ಸ್ಥಿರ ಠೇವಣಿ ಮಾಡಲಾಗಿದೆ.
2020ರ ಮಾರ್ಚ್‌ನಲ್ಲಿ 'ಪಿಎಂ ಕೇರ್ಸ್' ಆರಂಭಿಸಲಾಯಿತು. ಇದು ಪ್ರಾರಂಭವಾದಂದಿನಿಂದ ₹14,766.95 ಕೋಟಿ ದೇಣಿಗೆ ಸಂಗ್ರಹವಾಗಿದ್ದು, 2024-25ರವರೆಗೆ ₹8,133.29 ಕೋಟಿ ಖರ್ಚು ಮಾಡಲಾಗಿದೆ. ಈ ವೆಚ್ಚದ ಬಹುಪಾಲು ಕೋವಿಡ್ ಸಾಂಕ್ರಾಮಿಕ ಅವಧಿಯಲ್ಲೇ ನಡೆದಿದೆ.
'ಪಿಎಂ ಕೇರ್ಸ್' ನಿಧಿಯನ್ನು ಕೋವಿಡ್ ಸಾಂಕ್ರಾಮಿಕದ ನಡುವೆ 2020ರ ಮಾರ್ಚ್ 27ರಂದು ಪ್ರಧಾನ ಮಂತ್ರಿ ಅವರನ್ನು ಪದನಿಮಿತ್ತ ಅಧ್ಯಕ್ಷರನ್ನಾಗಿ ಇರಿಸಿಕೊಂಡು ಸ್ಥಾಪಿಸಲಾಗಿತ್ತು.
'ಕೊನೆಗೂ 2024-25ನೇ ಸಾಲಿನ 'ಪಿಎಂ ಕೇರ್ಸ್' ನಿಧಿಯ ಆಡಿಟ್ ವರದಿಯನ್ನು ಸಾರ್ವಜನಿಕಗೊಳಿಸಲಾಗಿದೆ! ಪ್ರಮುಖ ಮುಖ್ಯಾಂಶವೆಂದರೆ ₹8,452 ಕೋಟಿಯಲ್ಲಿ ಕೇವಲ ಶೇ 0.01ರಷ್ಟು ಮಾತ್ರ ಬಳಸಲಾಗಿದೆ!. 'ಪಿಎಂ ಕೇರ್ಸ್' ನಿಧಿಯಲ್ಲಿ ಇಷ್ಟೊಂದು ದೊಡ್ಡ ಮೊತ್ತದ ಹಣವಿದ್ದರೂ ಬಳಸದೆ ಸುಮ್ಮನೆ ಏಕೆ ಇಟ್ಟುಕೊಳ್ಳಲಾಗಿದೆ' ಎಂದು ಪ್ರಶ್ನಿಸಿ ಮಾಹಿತಿ ಹಕ್ಕು ಹೋರಾಟಗಾರ್ತಿ ಅಂಜಲಿ ಭಾರದ್ವಾಜ್ 'ಎಕ್ಸ್'ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಕೆಲವು ಸಂಸ್ಥೆಗಳು ₹324 ಕೋಟಿ ಮರುಪಾವತಿ ಮಾಡಿವೆ. ಆದರೆ, ಇದನ್ನು ಯಾವುದಕ್ಕಾಗಿ ಮತ್ತು ಏಕಾಗಿ ಮರು ಪಾವತಿಸಲಾಯಿತು ಎಂಬ ಮಾಹಿತಿ ಇಲ್ಲ?, ಯಾವ ಸಂಸ್ಥೆ ಮರುಪಾವತಿ ಮಾಡಿದೆ? ದೋಷಪೂರಿತ ಉಪಕರಣಗಳ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಮರುಪಾವತಿ ಮಾಡಲಾಗಿದೆಯೇ? ಆಡಿಟ್ ವರದಿಯ ಜತೆಗಿನ ವಿವರಗಳನ್ನು ಏಕೆ ಅಪ್‌ಲೋಡ್ ಮಾಡಿಲ್ಲ' ಎಂದು ಅವರು ಪ್ರಶ್ನಿಸಿದ್ದಾರೆ.
ಸಂಕಷ್ಟದ ಸಮಯದಲ್ಲಿ ನಾಗರಿಕರಿಗೆ ಸಹಾಯ ಮಾಡಲು ಸ್ಥಾಪಿಸಲಾದ ಮತ್ತು ವಿದೇಶಿ ಮೂಲಗಳಿಂದ ಸಾವಿರಾರು ಕೋಟಿ ಸಂಗ್ರಹಿಸಿದ ಈ ನಿಧಿಯು ರಹಸ್ಯಮಯವಾಗಿದೆ. 'ಪಿಎಂ ಕೇರ್ಸ್' ನಿಧಿಯು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡಲು ನಿರಾಕರಿಸುವ ಮೂಲಕ ಸಾರ್ವಜನಿಕ ಪರಿಶೀಲನೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದೂ ಭಾರದ್ವಾಜ್ ದೂರಿದ್ದಾರೆ.
2022-23ರಲ್ಲಿ ನಿಧಿಯು ದೇಣಿಗೆಯಾಗಿ ₹912.21ಕೋಟಿ ಸಂಗ್ರಹಿಸಿದ್ದರೆ, ₹439.38 ಕೋಟಿ ಖರ್ಚು ಮಾಡಿತ್ತು. ಈ ಅವಧಿಯಲ್ಲಿ ಕೋವಿಡ್‌ನಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳಿಗಾಗಿ ₹346 ಕೋಟಿ ಮತ್ತು ಸುಮಾರು 1 ಲಕ್ಷ ಆಮ್ಲಜನಕ ಸಾಂದ್ರಕಗಳನ್ನು (ಆಕ್ಸಿಜನ್) ಖರೀದಿಸಲು ₹91.87 ಕೋಟಿ ಬಳಸಲಾಗಿತ್ತು.
ಕೋವಿಡ್ ಬಳಿಕ 'ಪಿಎಂ ಕೇರ್ಸ್'ಗೆ ಬರುವ ದೇಣಿಗೆ ಕಡಿಮೆಯಾಗಿದೆ. 2020-21ರಲ್ಲಿ ನಿಧಿಯು ಗರಿಷ್ಠ ಅಂದರೆ ₹7,678.68 ಕೋಟಿ ಸಂಗ್ರಹವಾಗಿತ್ತು ಮತ್ತು ₹3,976.17 ಕೋಟಿ ಖರ್ಚು ಮಾಡಲಾಗಿತ್ತು.
2021-22ರಲ್ಲಿ ದೇಣಿಗೆಯಾಗಿ ₹1,936.88 ಕೋಟಿ ಹರಿದು ಬಂದಿದ್ದರೆ, ₹3,716.29 ಕೋಟಿ ವೆಚ್ಚ ಮಾಡಲಾಗಿತ್ತು.

