ನಾಗ್ಪುರ: ಪಾಕಿಸ್ತಾನ ಸಿಂಧ್ ಪ್ರಾಂತ್ಯದ ಸಿಂಧಿ ಸಮುದಾಯದ ಯುವತಿಯರು ಭಾರತದ ಯುವಕರನ್ನು ವರಿಸುವುದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ. ಆದರೆ 2025ರಲ್ಲಿ ಭಾರತ ಸೇನೆ ಕೈಗೊಂಡಿದ್ದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಬಳಿಕ ವೀಸಾ ಸಮಸ್ಯೆಯಿಂದಾಗಿ ನಿಶ್ಚಿತಾರ್ಥವಾಗಿದ್ದ ನೂರಾರು ಜೋಡಿಗಳ ಮದುವೆಗೆ ಅಡಚಣೆ ಉಂಟಾಗಿತ್ತು.
ಆದರೆ ಈಗ ವೀಸಾ ದೊರೆತ ಕಾರಣ ಸುಮಾರು 150 ಯುವತಿಯರು ಭಾರತಕ್ಕೆ ಬಂದಿದ್ದಾರೆ.
ವಾಘಾ-ಅಟ್ಟಾರಿ ಗಡಿಯನ್ನೂ ಮುಚ್ಚಿದ್ದ ಕಾರಣ, ನಿಶ್ಚಿತಾರ್ಥವಾಗಿ ಗಂಡನ ಮನೆ ಸೇರಿಬೇಕಿದ್ದ ಯುವತಿಯರು ತವರಿನಲ್ಲೇ ಉಳಿದುಕೊಂಡಿದ್ದರು.
ಈ ಬಗ್ಗೆ ಮಾತನಾಡಿರುವ ನಾಗ್ಪುರದ ಧಾರ್ಮಿಕ ಮುಖಂಡ ರಾಜೇಶ್ ಜಾಂಬಿಯಾ, 'ಕೊನೆಗೂ ಎಲ್ಲವೂ ಸುಸೂತ್ರವಾಗಿ ಅಂತ್ಯವಾಗಿದೆ. ಹಲವು ಪ್ರಯತ್ನಗಳ ಬಳಿಕ ಕೇಂದ್ರ ಸರ್ಕಾರ, ಸಿಂಧಿ ಯುವತಿಯರಿಗೆ ಮತ್ತು ಅವರ ಸಂಬಂಧಿಗಳಿಗೆ ಮದುವೆಗಾಗಿ ಭಾರತಕ್ಕೆ ಬರಲು ವೀಸಾ ನೀಡಿದೆ. ಆದರೆ ಭೂ ಗಡಿಯ ಮೂಲಕ ಬರದೆ, ಕೇವಲ ವಿಮಾನಯಾನ ಮೂಲಕ ಮಾತ್ರ ಬರಬೇಕು ಎಂಬ ಷರತ್ತನ್ನು ವಿಧಿಸಿದೆ. ಭಾರತಕ್ಕೆ ಬರಲು ನೇರ ವಿಮಾನ ಸೌಲಭ್ಯವಿಲ್ಲದ ಕಾರಣ ವಧು ಮತ್ತು ಅವರ ಕುಟುಂಬಸ್ಥರು ದುಬೈ, ಮಸ್ಕತ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳ ಮೂಲಕ ಭಾರತದ ವಿವಿಧ ನಗರಗಳಿಗೆ ತಲುಪಿದ್ದಾರೆ' ಎಂದು ತಿಳಿಸಿದ್ದಾರೆ.
'ಈ ಹಿಂದೆ ವಾಘಾ-ಅಟ್ಟಾರಿ ಗಡಿ ಮೂಲಕ ಭಾರತಕ್ಕೆ ಬರಬಹುದಿತ್ತು. ಆದರೆ 'ಆಪರೇಷನ್ ಸಿಂಧೂರ' ಬಳಿಕ ಎಲ್ಲವೂ ಬದಲಾಗಿದೆ. ಗಡಿ ಮೂಲಕ ಬರಲು ಯೋಜಿಸಿದ್ದ ಎಲ್ಲರ ವೀಸಾಗಳನ್ನು ಭಾರತ ನಿರಾಕರಿಸಿತ್ತು' ಎಂದು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ನಾಗ್ಪುರ, ಜೋಧ್‌ಪುರ, ಪುಣೆ, ರಾಯ್‌ಪುರ ಸೇರಿ ಭಾರತದ ವಿವಿಧ ನಗರಗಳಲ್ಲಿ ಮದುವೆ ಆಯೋಜನೆಗೊಂಡಿದೆ ಎಂದೂ ಅವರು ತಿಳಿಸಿದ್ದಾರೆ.
ಈ 150 ವಧುಗಳು ಭಾರತ ತಲುಪಿ ತಮ್ಮ ಮದುವೆ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ. ಇನ್ನು ಸುಮಾರು 300ಕ್ಕೂ ಹೆಚ್ಚು ಪಾಕಿಸ್ತಾನಿ ಸಿಂಧಿ ಮಹಿಳೆಯರು ಭಾರತದಲ್ಲಿ ಮದುವೆಯಾಗಲು ವೀಸಾಗಾಗಿ ಕಾಯುತ್ತಿದ್ದು, ಅವರಿಗೂ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ವಿವರಿಸಿದ್ದಾರೆ.

