ತಿರುವನಂತಪುರ: ಕೇರಳಂ ರಾಜ್ಯದಾದ್ಯಂತ ಸಂಭವಿಸಿದ ಮಳೆ ಅವಘಡಗಳಲ್ಲಿ ಒಟ್ಟು 15 ಜನರು ಮೃತಪಟ್ಟಿದ್ದು, ಏಳು ಮಂದಿ ನಾಪತ್ತೆಯಾಗಿದ್ದಾರೆ ಎಂದು ಮುಖ್ಯಮಂತ್ರಿ ವಿ.ಡಿ. ಸತೀಶನ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಪತ್ತನಂತಿಟ್ಟದ ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಉಳಿದಂತೆ ಪರಿಸ್ಥಿತಿ ನಿಯಂತ್ರಣದಲ್ಲಿದೆ' ಎಂದು ಹೇಳಿದರು.
'ಕೊಲ್ಲಂನಲ್ಲಿ 14 ಮೀನುಗಾರಿಕಾ ದೋಣಿಗಳನ್ನು ನಿಯೋಜಿಸಲಾಗಿದೆ. ತಮಿಳುನಾಡಿನಿಂದ ಎರಡು ಹೆಲಿಕಾಫ್ಟರ್‌ಗಳನ್ನು ತರಿಸಲಾಗಿದೆ. ಬಾಧಿತ ಪ್ರದೇಶಗಳಲ್ಲಿ ಎನ್‌ಡಿಆರ್‌ಎಫ್‌ನ ತಂಡಗಳು ಬೀಡುಬಿಟ್ಟಿವೆ. 316 ಕಾಳಜಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 11 ಸಾವಿರ ಜನರು ಆಶ್ರಯ ಪಡೆದಿದ್ದಾರೆ' ಎಂದು ಮಾಹಿತಿ ನೀಡಿದರು.
'ಇನ್ನೆರಡು ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಿಕೊಡುವಂತೆ ತಮಿಳುನಾಡಿಗೆ ಮನವಿ ಮಾಡಲಾಗಿದ್ದು, ಶೀಘ್ರವೇ ಅವರು ಬರಲಿದ್ದಾರೆ. ಅಗತ್ಯ ಬಿದ್ದರೆ ಐಟಿಬಿಪಿ ಸಿಬ್ಬಂದಿ ಮತ್ತು ರಕ್ಷಣಾ ಭದ್ರತಾ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳುವಂತೆ ಸಲಹೆ ನೀಡಲಾಗಿದೆ' ಎಂದು ತಿಳಿಸಿದರು.
'ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಲಾಗಿದ್ದು, ಹೆಲಿಕಾಫ್ಟರ್‌ಗಳು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿರುವ ಸಿಬ್ಬಂದಿ ಮೂಲಕ ಪೂರೈಸಲಾಗುವುದು. ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ' ಎಂದು ಅವರು ತಿಳಿಸಿದರು.
'164.98 ಹೆಕ್ಟೇರ್ ಬೆಳೆ ನಷ್ಟವಾಗಿದ್ದು, 3,596 ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಪ್ರಾಥಮಿಕ ಸಮೀಕ್ಷೆಯಿಂದ ತಿಳಿದುಬಂದಿದೆ. ಈ ಪ್ರಮಾಣ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ' ಎಂದರು.
ಮೃತದೇಹದ ಅಂತ್ಯಕ್ರಿಯೆಗೆ ಸರ್ಕಾರದಿಂದ ತಲಾ ₹10 ಸಾವಿರ ಮೃತರ ಕುಟುಂಬಗಳಿಗೆ ತಲಾ ₹8 ಲಕ್ಷ ಪರಿಹಾರ ಭೂಕುಸಿತದಿಂದ ಮನೆ ಕಳೆದುಕೊಂಡವರಿಗೆ ₹12 ಲಕ್ಷ ನೆರವು
ವಿ.ಡಿ. ಸತೀಶನ್ ಮುಖ್ಯಮಂತ್ರಿಪ್ರಮುಖ ಜಲಾಶಯಗಳಿಂದ ನೀರು ಹೊರಬಿಡಲಾಗುತ್ತದೆ ಎಂಬ ವದಂತಿ ಜನರಲ್ಲಿ ಆತಂಕ ಉಂಟುಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂಥ ವದಂತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

