ವಾಷಿಂಗ್ಟನ್: ಭಾರತೀಯ ವಲಸಿಗರು ನೀಡಿರುವ ಕೊಡುಗೆಗಳನ್ನು ಗುರುತಿಸುವ ಉದ್ದೇಶದಿಂದ ಆಗಸ್ಟ್ 15 ಅನ್ನು 'ಇಂಡಿಯಾ ಡೇ' ಎಂದು ಮ್ಯಾಸಚೂಸೆಟ್ಸ್ ಘೋಷಿಸಿದೆ.
ಅಮೆರಿಕದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿರುವ ಮ್ಯಾಸಚೂಸೆಟ್ಸ್ ಅಲ್ಲಿ ಹೆಚ್ಚಿನ ಸಂಖ್ಯೆಯ ಭಾರತೀಯರು ವಾಸವಾಗಿದ್ದಾರೆ.
ಬೋಸ್ಟನ್, ಕೇಂಬ್ರಿಡ್ಜ್ ನಗರಗಳು ಕೂಡ ಇದೇ ರಾಜ್ಯದಲ್ಲಿದ್ದು, ವ್ಯಾಸಂಗಕ್ಕಾಗಿ ಅಮೆರಿಕಗೆ ಬರುವ ಭಾರತ ಮೂಲದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ.
ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ, ವ್ಯಾಪಾರ ಸೇರಿದಂತೆ ಅಮೆರಿಕದ ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ಭಾರತೀಯ ವಲಸಿಗರು ಸಾಕಷ್ಟು ಕೊಡುಗೆ ನೀಡಿದ್ದು, ಅದನ್ನು ಗುರುತಿಸುವ ಉದ್ದೇಶದಿಂದ ಆ.15 ಅನ್ನು'ಇಂಡಿಯಾ ಡೇ'ಎಂದು ಘೋಷಿಸಲಾಗಿದೆ. ಅಂದಿನ ಕಾರ್ಯಕ್ರಮದ ಆಚರಣೆಯಲ್ಲಿ ಅಲ್ಲಿನ ನಿವಾಸಿಗಳು ಪಾಲ್ಗೊಳ್ಳುವಂತೆ ಮ್ಯಾಸಚೂಸೆಟ್ಸ್ ಗವರ್ನರ್ ಮೌರಾ ಹೀಲಿ ಅವರು ಮನವಿ ಮಾಡಿದ್ದಾರೆ.
ಭಾರತವು ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ನಾಗರಿಕ ಸಹಭಾಗಿತ್ವ, ಸಾಂಸ್ಕೃತಿಕ ವಿನಿಮಯ ಹಾಗೂ ಪರಸ್ಪರ ತಿಳುವಳಿಕೆಯನ್ನು ಬೆಳೆಸುವಲ್ಲಿ ಸ್ವಾತಂತ್ರ್ಯ ದಿನಾಚರಣೆಗಳು ಮತ್ತು ಸಮುದಾಯ ಸೇವಾ ಕಾರ್ಯಗಳು ಮುಖ್ಯವಾಗಿದೆ ಎಂದು ಹೇಳಿದ ಮೌರಾ ಹೀಲಿ, ಇದರ ಹಿಂದೆ ಸಮುದಾಯ ಸಂಘಟನೆಗಳು ಮತ್ತು ಕಾರ್ಯಕರ್ತರು ವಹಿಸಿರುವ ಪ್ರಮುಖ ಪಾತ್ರವನ್ನು ಶ್ಲಾಘಿಸಿದರು.
ಬೋಸ್ಟನ್‌ನ ಮೇಯರ್ ಮಿಚೆಲ್ ವು ಅವರು ಕೂಡ ಆಗಸ್ಟ್ 15 ಅನ್ನು 'ಇಂಡಿಯಾ ಡೇ' ಎಂದು ಘೋಷಿಸಿದ್ದಾರೆ. ಇದೇ ವೇಳೆ ಬೋಸ್ಟ್‌ನ್‌ನಲ್ಲಿ ಭಾರತೀಯ ದೂತವಾಸ ಕಚೇರಿಯ ಉದ್ಘಾಟನೆಯಾಗಲಿದೆ.
2026ರ ಆ.15ರಂದು ಭಾರತವು ತನ್ನ 79ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದೆ.

