ವರ್ಜೀನಿಯಾ: ವರ್ಜೀನಿಯಾ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಶನಿವಾರ(ಆ.15) ರಾತ್ರಿ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಡಾರ್ಮಿಟರಿಯ ಕ್ಲೋಸೆಟ್ನಲ್ಲಿ ಅಡಗಿದ್ದ 19 ವರ್ಷದ ಯುವಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಆರೋಪಿಯನ್ನು ವರ್ಜೀನಿಯಾದ ಹೆನ್ರಿಕೊ ಮೂಲದ ಕ್ಯಾಮರಾನ್ ಹ್ಯಾರಿಸ್ ಎಂದು ಗುರುತಿಸಲಾಗಿದೆ. ಆತ ವಿಶ್ವವಿದ್ಯಾಲಯದ ವಿದ್ಯಾರ್ಥಿಯಲ್ಲ. ಗಾಯಗೊಂಡ ಐವರಲ್ಲಿ ನಾಲ್ವರು ಇಲ್ಲಿನ ವಿದ್ಯಾರ್ಥಿಗಳಲ್ಲ. ಗಾಯಾಳುಗಳ ವಯಸ್ಸು 17 ರಿಂದ 23 ವರ್ಷಗಳಷ್ಟಿದೆ ಎಂದು ಚೆಸ್ಟರ್ಫೀಲ್ಡ್ ಕೌಂಟಿ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಹಿಂದಿನ ಉದ್ದೇಶದ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ನೀಡಿಲ್ಲ.
ಈ ಘಟನೆಯು ನಮ್ಮ ವಿದ್ಯಾರ್ಥಿಗಳು, ಪೋಷಕರು, ಹಳೆಯ ವಿದ್ಯಾರ್ಥಿಗಳು ಮತ್ತು ವರ್ಜೀನಿಯಾ ವಿಶ್ವವಿದ್ಯಾಲಯದ ಸಮುದಾಯದಲ್ಲಿ ಉಂಟುಮಾಡಿರುವ ಆತಂಕವನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಕ್ಷೇಮವೇ ನಮ್ಮ ಅತ್ಯಂತ ಹೆಚ್ಚಿನ ಆದ್ಯತೆಯಾಗಿದೆ ಎಂದು ವಿಶ್ವವಿದ್ಯಾಲಯದ ಪ್ರಕಟಣೆ ತಿಳಿಸಿದೆ.
ವರ್ಜೀನಿಯಾ ವಿಶ್ವವಿದ್ಯಾಲಯದಲ್ಲಿ ಸುಮಾರು 5,700 ವಿದ್ಯಾರ್ಥಿಗಳಿದ್ದು, ಇದು ಕಪ್ಪು ವರ್ಣೀಯ ಅಮೆರಿಕನ್ನರಿಗಾಗಿ ಸ್ಥಾಪಿಸಲಾದ ಮೊದಲ ಕಾಲೇಜಾಗಿದೆ. 2023ರ ಮಾರ್ಚ್ನಲ್ಲಿ ವಿಶ್ವವಿದ್ಯಾಲಯದ ಪಾರ್ಕಿಂಗ್ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಏಳು ಜನ ಮೃತಪಟ್ಟಿದ್ದರು.

