ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಷಷ್ಠ ವಾರ್ಷಿಕ ಆರಾಧನೆ ಸೆ.1 ಮಂಗಳವಾರ ಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರಗಲಿದೆ. ಅಂದು ಬೆಳಗ್ಗೆ 6.30 ರಿಂದ 8ರ ತನಕ ಮಹಾಪೂಜೆ, ಭಜನೆ, ಧ್ವಜಾರೋಹಣ, ಅಖಿಲ ಭಾರತೀಯ ಕುಟುಂಬ ಪ್ರಬೋಧಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ಟರಿಂದ ಆಶಯ ಭಾಷಣ ನಡೆಯಲಿದೆ. 10 ರಿಂದ ಭಕ್ತಿಸಂಗೀತ, 12ಕ್ಕೆ ಮಹಾಪೂಜೆ, ವೃಂದಾವನ ಪೂಜೆ, ಮಂತ್ರಾಕ್ಷತೆ, ಅಪರಾಹ್ಣ 2.30 ರಿಂದ ನಡೆಯುವ ಆರಾಧನೋತ್ಸವ ಮಹಾಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸುವರು. ಕರ್ನಾಟಕ ಸರ್ಕಾರದ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಟಿ.ಶಾಮ್ ಭಟ್ ಗೌರವ ಉಪಸ್ಥಿತರಿರುವರು. ಖ್ಯಾತ ವಯಲಿನ್ ವಾದಕ ವಿದ್ವಾನ್ ವಿಠಲ ರಾಮಮೂರ್ತಿ ಇವರಿಂದ ಗುರುಸ್ಮರಣೆ. ಉದ್ಯಮಿ ಸುರೇಶ್ ಕೆ.ನಾಯಕ್ ಪೂನಾ ಅವರಿಗೆ ಶ್ರೀ ಕೇಶವಾನಂದ ಭಾರತೀ ಸ್ಮøತಿಗೌರವ ಪ್ರಧಾನ ಮಾಡಲಾಗುವುದು. 4.30 ರಿಂದ ಸಂಗೀತ ಕಚೇರಿಯಲ್ಲಿ ವಿದ್ವಾನ್ ಡಾ. ಚೇರ್ತಲ ಕೆ.ಎನ್. ರಂಗನಾಥ ಶರ್ಮ ಹಾಡುಗಾರಿಕೆಯಲ್ಲಿ, ವಯಲಿನ್ ನಲ್ಲಿ ವಿದ್ವಾನ್ ವಿಠಲ ರಾಮಮೂರ್ತಿ, ಮೃದಂಗದಲ್ಲಿ ವಿದ್ವಾನ್ ಬಿ. ಶಿವರಾಮನ್, ಘಟದಲ್ಲಿ ವಿದ್ವಾನ್ ಡಾ. ಸುರೇಶ್ ವೈದ್ಯನಾಥನ್ ಜೊತೆಗೂಡಲಿದ್ದಾರೆ. ರಾತ್ರಿ 7 ರಿಂದ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ತೆಂಕುತಿಟ್ಟು ಯಕ್ಷಗಾನ ಬಯಲಾಟ ಶ್ರೀಕೃಷ್ಣ ಜನ್ಮ ಹಾಗೂ ಸುಂದೋಪಸುಂದ ಕಾಳಗ ಪ್ರದರ್ಶನಗೊಳ್ಳಲಿದೆ. ಹನುಮಗಿರಿ ಮೇಳದ ಪ್ರಧಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಹಾಗೂ ಪ್ರಸಿದ್ಧ ಕಲಾವಿದರು ಪ್ರದರ್ಶನ ನೀಡಲಿದ್ದಾರೆ.


