ವಾಷಿಂಗ್ಟನ್: 2028ರ ಅಧ್ಯಕ್ಷೀಯ ಚುನಾವಣೆಗೆ ಜೆ.ಡಿ. ವ್ಯಾನ್ಸ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಾಸಗಿ ಸಭೆಯೊಂದರಲ್ಲಿ ಚರ್ಚಿಸಿದ್ದಾರೆ ಎಂದು 'ವಾಷಿಂಗ್ಟನ್ ಪೋಸ್ಟ್' ವರದಿ ಮಾಡಿದೆ.
ಹೆಸರು ಹೇಳಲಿಚ್ಛಿಸದ ಶ್ವೇತಭವನದ ಅಧಿಕಾರಿಗಳ ಹೇಳಿಕೆಗಳನ್ನು ಉಲ್ಲೇಖಿಸಿ ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಎರಡು ವಾರಗಳ ಹಿಂದೆ ಓವಲ್ ಆಫೀಸ್‌ನಲ್ಲಿ ನಡೆದ ಸಭೆಯಲ್ಲಿ ಟ್ರಂಪ್ ಅವರು 2028ರ ಅಧ್ಯಕ್ಷೀಯ ಚುನಾವಣೆಯಲ್ಲಿ ಜೆ.ಡಿ. ವ್ಯಾನ್ಸ್ ಗೆಲ್ಲುವುದನ್ನು ನೋಡಲು ಬಯಸುವುದಾಗಿ ಹೇಳಿಕೊಂಡಿದ್ದಾರೆ.
ಇದು ವ್ಯಾನ್ಸ್ ಅವರನ್ನು ಬಹಿರಂಗವಾಗಿ ಬೆಂಬಲಿಸಲು ಟ್ರಂಪ್ ಸಿದ್ಧರಿದ್ದಾರೆ ಎಂಬುದರ ಸೂಚನೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ಉತ್ತರಾಧಿಕಾರಿಯನ್ನು ಟ್ರಂಪ್ ಇನ್ನು ಸಂಪೂರ್ಣವಾಗಿ ಅಂತಿಮಗೊಳಿಸಿಲ್ಲ ಎಂದು ಕೆಲವು ಸಲಹೆಗಾರರು ಹೇಳುತ್ತಿರುವುದರ ನಡುವೆಯೂ ಅಧಿಕಾರ ಹಸ್ತಾಂತರದ ಚರ್ಚೆ ಮುನ್ನೆಲೆಗೆ ಬಂದಿದೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಲು ಟ್ರಂಪ್ ಚಿಂತನೆ ನಡೆಸುತ್ತಿದ್ದು, ಸೂಕ್ತ ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಈ ಹಿಂದೆ ಉತ್ತರಾಧಿಕಾರಿ ಆಯ್ಕೆ ಸಂಬಂಧ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಟ್ರಂಪ್, ವ್ಯಾನ್ಸ್ ಮತ್ತು ಮಾರ್ಕೊ ಇಬ್ಬರೂ ಸೂಕ್ತ ಅಭ್ಯರ್ಥಿಗಳಾಗುತ್ತಾರೆ ಎಂದು ಬಹಿರಂಗವಾಗಿ ಹೇಳಿದ್ದರಾದರೂ, ಅಗ್ರಸ್ಥಾನದಲ್ಲಿ ಯಾರನ್ನು ನೋಡಲು ಬಯಸುತ್ತಾರೆ ಎಂಬುದನ್ನು ನಿರ್ದಿಷ್ಟಪಡಿಸಲು ನಿರಾಕರಿಸಿದ್ದರು.
ಟ್ರಂಪ್ ಅವರು ವ್ಯಾನ್ಸ್ ಹೆಸರನ್ನು ಅಂತಿಮಗೊಳಿಸಿದ್ದಾರೆ ಎಂದು ನಾವು ನಂಬುವುದಿಲ್ಲ. ಟ್ರಂಪ್ ವಿವಿಧ ಸಂದರ್ಭಗಳಲ್ಲಿ ವಿಭಿನ್ನ ಹೇಳಿಕೆಗಳನ್ನು ನೀಡುತ್ತಾರೆ ಮತ್ತು 2028ರ ಬೆಂಬಲದ ವಿಷಯದಲ್ಲಿ ತಮ್ಮ ನಿರ್ಧಾರ ಬದಲಾಯಿಸುವ ಸಾಧ್ಯತೆಯಿದೆ ಎಂದೂ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆದಾಗ್ಯೂ, ವ್ಯಾನ್ಸ್ ತಮ್ಮ ನಿರ್ಧಾರಗಳನ್ನು ಇನ್ನೂ ಖಚಿತಪಡಿಸಿಲ್ಲ.
ಜೂನ್‌ನಲ್ಲಿ 'ಸಿಬಿಎಸ್' ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ವ್ಯಾನ್ಸ್, 'ಮಧ್ಯಂತರ ಚುನಾವಣೆ ಬಳಿಕ ಈ ವಿಷಯದ ಬಗ್ಗೆ ತಮ್ಮ ಹೆಂಡತಿಯೊಂದಿಗೆ ಚರ್ಚಿಸುವುದಾಗಿ ಹೇಳಿದ್ದರು. ಆದರೆ, ನನ್ನ ನಿರ್ಧಾರ ಏನೇ ಇರಲಿ, ಅಧ್ಯಕ್ಷರು (ಟ್ರಂಪ್) ಬೆಂಬಲವಾಗಿ ನಿಲ್ಲುತ್ತಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ' ಎಂದಿದ್ದರು.

