ವಾಷಿಂಗ್ಟನ್: ವಿವಿಧ ದೇಶಗಳಿಂದ ಸಂಗ್ರಹಿಸಿದ್ದ ವ್ಯಾಪಕ ಸುಂಕದಲ್ಲಿ ಸುಮಾರು 100 ಬಿಲಿಯನ್ ಡಾಲರ್‌ನಷ್ಟನ್ನು ಮರುಪಾವತಿಸಿದೆ ಎಂದು ಅಮೆರಿಕದ ಕಸ್ಟಮ್ಸ್ ಅಧಿಕಾರಿಗಳು ಸಲ್ಲಿಸಿದ ನ್ಯಾಯಾಲಯದ ದಾಖಲೆಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ಅಂತರರಾಷ್ಟ್ರೀಯ ವ್ಯಾಪಾರ ಕುರಿತಾದ ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದ್ದು, ಸರ್ಕಾರದ ಕಸ್ಟಮ್ಸ್ ರೀಫಂಡ್ ಸಿಸ್ಟಂ ಮೂಲಕ ಬಡ್ಡಿ ಸಮೇತ ಸುಂಕ ಮರುಪಾವತಿಸಲಾಗಿದೆ.
ಖಜಾನೆ ಇಲಾಖೆಗೆ ಸುಂಕ ಮರುಪಾವತಿಗೆ ಸೂಚಿಸಲಾಗಿತ್ತು. ಜುಲೈ ಅಂತ್ಯಕ್ಕೆ ಆಯಾ ದೇಶಗಳಿಗೆ ರೀಫಂಡ್ ತಲುಪಿದೆ ಎಂದು ತಿಳಿಸಲಾಗಿದೆ.
ಈ ವರ್ಷದ ಆರಂಭದಲ್ಲಿ ಸುಪ್ರೀಂ ಕೋರ್ಟ್ ಸರಿಸುಮಾರು 166 ಬಿಲಿಯನ್ ಡಾಲರ್ ಮೌಲ್ಯದ ಸುಂಕವನ್ನು ಅಮಾನ್ಯಗೊಳಿಸಿತ್ತು. ಟ್ರಂಪ್ ಸಂಗ್ರಹಿಸಿದ್ದ ಸುಂಕದ ಅರ್ಧಕ್ಕಿಂತ ಹೆಚ್ಚಿನ ಮೊತ್ತವನ್ನು ಇದು ಪ್ರತಿನಿಧಿಸುತ್ತದೆ.
ಫೆಬ್ರುವರಿ 20ರಂದು ಅಮೆರಿಕ ನ್ಯಾಯಾಲಯ ನೀಡಿದ 6-3 ಮಹತ್ವದ ತೀರ್ಪಿನಲ್ಲಿ, ಅಂತರರಾಷ್ಟ್ರೀಯ ತುರ್ತು ಆರ್ಥಿಕ ಅಧಿಕಾರ ಕಾಯ್ದೆ (ಐಇಇಪಿಎ) ಬಳಸಿಕೊಳ್ಖುವ ಮೂಲಕ ಟ್ರಂಪ್ ತಮ್ಮ ಅಧಿಕಾರವನ್ನು ಮೀರಿದ್ದಾರೆ ಎಂದು ಹೇಳಲಾಗಿತ್ತು. ಅಮೆರಿಕದ ವ್ಯಾಪಾರ ಪಾಲುದಾರರ ಆಮದುಗಳ ಮೇಲೆ ವ್ಯಾಪಕ ಸುಂಕ ವಿಧಿಸಲು ಅಧ್ಯಕ್ಷರಿಗೆ ಏಕಪಕ್ಷೀಯ ಅಧಿಕಾರವನ್ನು ಈ ಶಾಸನವು ನೀಡಿಲ್ಲ ಎಂದು ನ್ಯಾಯಾಧೀಶರು ತೀರ್ಮಾನಿಸಿದ್ದರು.
ಬೇಕಾಬಿಟ್ಟಿ ವಸೂಲಿ ಮಾಡಿದ್ದ ಸುಂಕ ಮರುಪಾವತಿಸಿರುವುದು ಈಗ ಅಮೆರಿಕದಲ್ಲಿ ಮತ್ತೊಂದು ಚರ್ಚೆಯ ವಿಷಯವಾಗಿದೆ. ಟ್ರಂಪ್ ಅವರನ್ನು ಟೀಕಿಸುತ್ತಿದ್ದವರಿಗೆ ಇದು ಹೊಸ ಅಸ್ತ್ರ ನೀಡಿದೆ.
ಭಾರತಕ್ಕೆ ಈ ರೀಫಂಡ್‌ನಿಂದ ಎಷ್ಟು ಮೊತ್ತ ಸಂದಾಯವಾಗಿದೆ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ಹಂಚಿಕೊಳ್ಳಬೇಕಿದೆ.

