HEALTH TIPS

ಅವರ 26 ವರ್ಷಗಳ ಕಾನೂನು ಹೋರಾಟ | ಶೌರ್ಯಚಕ್ರ ಪುರಸ್ಕೃತನ ವಿಧವೆಗೆ ವಿಶೇಷ ಕುಟುಂಬ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ: ಶೌರ್ಯಚಕ್ರ ಪ್ರಶಸ್ತಿ ಪುರಸ್ಕೃತ ಮೋಹನ್ ಸಿಂಗ್ ಅವರ ವಿಧವೆಗೆ ವಿಶೇಷ ಕುಟುಂಬ ಪಿಂಚಣಿ ಮತ್ತು ಹೆಚ್ಚುವರಿ ಪರಿಹಾರವನ್ನು ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಕೇಂದ್ರಕ್ಕೆ ನಿರ್ದೇಶನ ನೀಡಿದ್ದು, ಇದರೊಂದಿಗೆ ತನ್ನ ಹಕ್ಕಿಗಾಗಿ ಅವರ 26 ವರ್ಷಗಳ ಕಾನೂನು ಹೋರಾಟ ಅಂತ್ಯಗೊಂಡಿದೆ.


ಪರಮೋಚ್ಚ ತ್ಯಾಗ ಮಾಡುವ ಯೋಧರ ಕುಟುಂಬಗಳು ತಮ್ಮ ನ್ಯಾಯಯುತ ಸೌಲಭ್ಯಗಳನ್ನು ಪಡೆಯಲು ದೀರ್ಘಾವಧಿಯ ಕಾನೂನು ಹೋರಾಟ ನಡೆಸುವಂತಾಗಬಾರದು ಎಂದು ನ್ಯಾಯಾಲಯವು ಕಳವಳ ವ್ಯಕ್ತಪಡಿಸಿದೆ.

ಮೋಹನ್ ಸಿಂಗ್ ಅವರ ಪತ್ನಿ ಕುಲ್ದೀಪ್ ಕೌರ್ ಅವರಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ. ಮೊತ್ತವನ್ನು ಪಾವತಿಸುವಂತೆ ಮತ್ತು ಅವರ ವಿಶೇಷ ಕುಟುಂಬ ಪಿಂಚಣಿಯನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ ಪಲ್ಲಿ ಅವರ ಪೀಠವು ಕೇಂದ್ರಕ್ಕೆ ಆದೇಶಿಸಿದೆ.

►ಪ್ರಕರಣದ ಹಿನ್ನೆಲೆ:

ಜುಲೈ 10, 2000ರಂದು ಭಾರತ-ಚೀನಾ ಗಡಿಯಲ್ಲಿ ಆಯಕಟ್ಟಿನ ರಸ್ತೆ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮೋಹನ್ ಸಿಂಗ್ ಮೃತಪಟ್ಟಿದ್ದರು. ನ್ಯಾಯಾಲಯದ ದಾಖಲೆಗಳ ಪ್ರಕಾರ, ಭೂಕುಸಿತದ ಸಂದರ್ಭದಲ್ಲಿ ಬಂಡೆಗಳು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದ ಸಹೋದ್ಯೋಗಿಗಳನ್ನು ರಕ್ಷಿಸಿದ ಬಳಿಕ ಅವರು ಸ್ವತಃ ಅವಶೇಷಗಳ ಅಡಿಯಲ್ಲಿ ಸಿಲುಕಿ ಅಸುನೀಗಿದ್ದರು.

ಕೇಂದ್ರ ಸರಕಾರವು ಅವರ ಶೌರ್ಯವನ್ನು ಗುರುತಿಸಿ 2001ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತದ ಮೂರನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ ಶೌರ್ಯಚಕ್ರವನ್ನು ನೀಡಿ ಗೌರವಿಸಿತ್ತು.

ಶೌರ್ಯ ಪ್ರಶಸ್ತಿ ಲಭಿಸಿದ್ದರೂ, ಕುಲ್ದೀಪ್ ಕೌರ್ ಸಲ್ಲಿಸಿದ್ದ ವಿಶೇಷ ಕುಟುಂಬ ಪಿಂಚಣಿ ಅರ್ಜಿಯನ್ನು ತಿರಸ್ಕರಿಸಿದ್ದ ಕೇಂದ್ರವು, ಅವರು ಈಗಾಗಲೇ ಕಾರ್ಮಿಕರ ಪರಿಹಾರ ಕಾಯ್ದೆಯಡಿ ಪರಿಹಾರವನ್ನು ಪಡೆದಿರುವುದರಿಂದ ಹೆಚ್ಚುವರಿ ಪಿಂಚಣಿ ಸೌಲಭ್ಯಗಳಿಗೆ ಅರ್ಹರಲ್ಲ ಎಂದು ವಾದಿಸಿತ್ತು.

ಆದರೆ, ಅಧಿಕಾರಿಗಳು ಈ ಪ್ರಕರಣವನ್ನು ತಪ್ಪಾಗಿ ವರ್ಗೀಕರಿಸಿದ್ದಾರೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯವು, ಮೋಹನ್ ಸಿಂಗ್ ಅವರ ತ್ಯಾಗವು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳ 'ಸಿ' ವರ್ಗದಡಿ ಬರುತ್ತದೆ. ಇದರಿಂದಾಗಿ ಅವರ ಕುಟುಂಬವು ವಿಶೇಷ ಕುಟುಂಬ ಪಿಂಚಣಿ ಮತ್ತು ಸಂಬಂಧಿತ ಸೌಲಭ್ಯಗಳಿಗೆ ಅರ್ಹವಾಗಿದೆ ಎಂದು ಅಭಿಪ್ರಾಯಿಸಿತು.

ವಿಚಾರಣೆಯ ಸಂದರ್ಭದಲ್ಲಿ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ನ್ಯಾಯಾಲಯದ ಹಿಂದಿನ ನಿರ್ದೇಶನಗಳಂತೆ ಸರಕಾರವು ಈಗಾಗಲೇ ಬಾಕಿ ಇರುವ ಹಣವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮೂಲ ಮೊತ್ತವಾಗಿ 14.28 ಲಕ್ಷ ರೂ. ಮತ್ತು ವಿಶೇಷ ಕುಟುಂಬ ಪಿಂಚಣಿಯ ಬಾಕಿ ಮೊತ್ತವಾಗಿ 4.12 ಲಕ್ಷ ರೂ. ಸೇರಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಸಂವಿಧಾನದ 142ನೇ ವಿಧಿಯಡಿಯಲ್ಲಿ ತನ್ನ ಅಧಿಕಾರವನ್ನು ಚಲಾಯಿಸಿದ ಸರ್ವೋಚ್ಚ ನ್ಯಾಯಾಲಯವು, ಕುಲ್ದೀಪ್ ಕೌರ್ ಅವರಿಗೆ ಹೆಚ್ಚುವರಿಯಾಗಿ 10 ಲಕ್ಷ ರೂ.ಗಳ ಇಡಿಗಂಟನ್ನು ಪಾವತಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿತು.









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries