ಸುರಬಾಯಾ: ಇಲ್ಲಿನ ಜಾವಾ ಮುಖ್ಯದ್ವೀಪದ ಬಳಿ ಶನಿವಾರ ದೋಣಿಗೆ ಬೆಂಕಿ ತಗುಲಿ 5 ಮಂದಿ ಮೃತಪಟ್ಟಿದ್ದು, ರಕ್ಷಣಾ ತಂಡದ ಸದಸ್ಯರು 231 ಮಂದಿಯನ್ನು ರಕ್ಷಿಸಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಬಹಳಷ್ಟು ಮಂದಿ ನೀರಿಗೆ ಹಾರಿದ್ದು, ಹಲವು ಗಂಟೆ ತೇಲುತ್ತಿದ್ದರು ಎಂದು ದೋಣಿಯಲ್ಲಿದ್ದವರು ತಿಳಿಸಿದ್ದಾರೆ.ನಂತರ ಅವರ ಮಾಹಿತಿ ಲಭ್ಯವಾಗಿಲ್ಲ.
ಇಂಡೋನೇಷ್ಯಾದ ಎರಡನೇ ಅತಿ ದೊಡ್ಡ ನಗರವಾದ ಪೂರ್ವ ಜಾವಾದ ಸುರಬಾಯಾ ಪಟ್ಟಣದಿಂದ ದಕ್ಷಿಣ ಸುಲಾವೆಸಿಯ ಮಕಸ್ಸಾರ್‌ನತ್ತ ದೋಣಿ ತೆರಳುತ್ತಿತ್ತು. ಪ್ರಾಥಮಿಕ ಮಾಹಿತಿ ಪ್ರಕಾರ, 39 ಮಂದಿ ಸಿಬ್ಬಂದಿ ಸೇರಿದಂತೆ 271 ಮಂದಿ ಪ್ರಯಾಣಿಸುತ್ತಿದ್ದರು. ಬೆಳಿಗ್ಗೆ 6ರಿಂದ 7 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ.
ದೋಣಿ ಹತ್ತಿದ ಪ್ರಯಾಣಿಕರ ಪೈಕಿ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂದು ಇನ್ನೂ ಖಚಿತಪಟ್ಟಿಲ್ಲ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ನಾಪತ್ತೆಯಾದವರ ಸಂಬಂಧಿಕರನ್ನು ಸಂಪರ್ಕಿಸಿ ಅವರಿಂದಲೂ ಮಾಹಿತಿ ಪಡೆಯಲಾಗುತ್ತಿದೆ.
ಬೆಂಕಿಗೆ ಕಾರಣ ಎಂಬುದು ತಿಳಿದುಬಂದಿಲ್ಲ. ತನಿಖೆ ಮುಂದುವರಿದಿದೆ. ದೋಣಿಯಲ್ಲಿ ಟ್ರಕ್‌ಗಳು ಸೇರಿದಂತೆ 180 ವಾಹನಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

