HEALTH TIPS

ಶೇ 56ರಷ್ಟು ವಾಹನಗಳಿಗಿಲ್ಲ ವಿಮೆ: ತೈಲಪೂರೈಕೆ ನಿರಾಕರಿಸುವ ಯೋಜನೆ ರೂಪಿಸಿ ಎಂದ SC

ನವದೆಹಲಿ: ದೇಶದಾದ್ಯಂತ ಸಂಚರಿಸುತ್ತಿರುವ ವಾಹನಗಳ ಪೈಕಿ ಶೇಕಡ 56ರಷ್ಟು ವಾಹನಗಳು ವಿಮೆ (ಇನ್ಶೂರೆನ್ಸ್) ಹೊಂದಿಲ್ಲದಿರುವುದು ಆಘಾತಕಾರಿ ಎಂದಿರುವ ಸುಪ್ರೀಂ ಕೋರ್ಟ್, ಥರ್ಡ್‌ ಪಾರ್ಟಿ ವಿಮೆ ಇಲ್ಲದ ವಾಹನಗಳಿಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ಇಂಧನ ಪೂರೈಕೆಯನ್ನು ನಿರಾಕರಿಸುವಂತಹ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.


ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರ ಪೀಠವು, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ ಈ ಮಹತ್ವದ ನಿರ್ದೇಶನ ನೀಡಿದೆ. ಜತೆಗೆ, ಈ ಕುರಿತು ಅಗತ್ಯ ನಿರ್ದೇಶನಗಳನ್ನು ತಕ್ಷಣವೇ ಹೊರಡಿಸುವಂತೆ ವಿಮಾ ನಿಯಂತ್ರಣ ಪ್ರಾಧಿಕಾರಕ್ಕೆ (ಐಆರ್‌ಡಿಎ) ಸೂಚಿಸಿದೆ.

2024ರ ಡಿಸೆಂಬರ್‌ನ ಹಣಕಾಸು ಸ್ಥಾಯಿ ಸಮಿತಿಯ ವರದಿಯನ್ನು ಉಲ್ಲೇಖಿಸಿದ ನ್ಯಾಯಪೀಠವು, ದೇಶದಾದ್ಯಂತ ನೋಂದಾಯಿತ 30.48 ಕೋಟಿ ವಾಹನಗಳ ಪೈಕಿ 16.54 ಕೋಟಿ ವಾಹನಗಳು ಯಾವುದೇ ವಿಮೆ ಹೊಂದಿಲ್ಲದಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿದೆ.

'ದೇಶದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಶೇಕಡ 22ರಷ್ಟು ಅಪಘಾತಗಳು ವಿಮೆ ಇಲ್ಲದ ವಾಹನಗಳಿಂದ ಸಂಭವಿಸುತ್ತಿದ್ದು, ಇದು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 146ರ ಅಡಿಯಲ್ಲಿ ಕಡ್ಡಾಯವಾಗಿರುವ 'ಥರ್ಡ್‌ ಪಾರ್ಟಿ ವಿಮೆ'ಯ ಉದ್ದೇಶವನ್ನೇ ವಿಫಲಗೊಳಿಸುತ್ತಿದೆ. ಇದರಿಂದಾಗಿ ಅಪಘಾತಕ್ಕೊಳಗಾದ ಸಂತ್ರಸ್ತರಿಗೆ ಸಮಯಕ್ಕೆ ಸರಿಯಾಗಿ ಪರಿಹಾರ ಸಿಗದಂತಾಗಿದೆ' ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿದೆ.

ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು, ವಿಮೆ ಅವಧಿ ಮುಗಿದಿರುವ ವಾಹನಗಳ ಮಾಲೀಕರು ವಿಮೆ ನವೀಕರಿಸುವವರೆಗೆ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನಿರಾಕರಿಸುವ ಪ್ರಾಯೋಗಿಕ ಯೋಜನೆಯೊಂದನ್ನು ವಿಮಾ ನಿಯಂತ್ರಣ ಪ್ರಾಧಿಕಾರ (ಐಆರ್‌ಡಿಎ) ಹಾಗೂ ರಸ್ತೆ ಸಾರಿಗೆ ಸಚಿವಾಲಯವು ಜಂಟಿಯಾಗಿ ರೂಪಿಸಬೇಕು ಎಂದು ಪೀಠ ತಾಕೀತು ಮಾಡಿದೆ.

ಅಲ್ಲದೆ, ಹೆದ್ದಾರಿಗಳಲ್ಲಿ ಈಗಾಗಲೇ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆಯ (ಎಐ) ಆಟೊಮ್ಯಾಟಿಕ್‌ ನಂಬರ್‌ ಪ್ಲೇಟ್‌ ರೆಕಗ್ನಿಷನ್‌ (ಎಎನ್‌ಪಿಆರ್‌) ಕ್ಯಾಮೆರಾಗಳನ್ನು 'ಇನ್ಶೂರೆನ್ಸ್ ಇನ್ಫಾರ್ಮೇಷನ್ ಬ್ಯೂರೊ' ಮತ್ತು 'ವಾಹನ್' ಪೋರ್ಟಲ್‌ನೊಂದಿಗೆ ಸಂಯೋಜಿಸುವ ಮೂಲಕ ವಿಮೆ ಇಲ್ಲದ ವಾಹನಗಳಿಗೆ ಸ್ವಯಂಚಾಲಿತವಾಗಿ ಇ-ಚಲನ್ ಜಾರಿಗೊಳಿಸಬೇಕು. ಸ್ಥಳದಲ್ಲೇ ವಿಮೆ ಪರಿಶೀಲಿಸಲು ಪೊಲೀಸರಿಗೆ ಅಗತ್ಯ ಉಪಕರಣಗಳು ಅಥವಾ ಮೊಬೈಲ್ ಆಯಪ್‌ಗಳನ್ನು ಒದಗಿಸಬೇಕು ಎಂದೂ ಸೂಚಿಸಿದೆ.

ಹೊಸದಾಗಿ ಖರೀದಿಸುವ ಅಥವಾ ನೋಂದಾಯಿಸುವ ಖಾಸಗಿ ಕಾರುಗಳಿಗೆ ಕಡ್ಡಾಯ ಥರ್ಡ್ ಪಾರ್ಟಿ ವಿಮೆ ಅವಧಿಯನ್ನು 3ರಿಂದ 4 ವರ್ಷಗಳಿಗೆ ಹಾಗೂ ಹೊಸ ದ್ವಿಚಕ್ರ ವಾಹನಗಳಿಗೆ 5 ರಿಂದ 6 ವರ್ಷಗಳಿಗೆ ಹೆಚ್ಚಿಸಿ ಸುಪ್ರೀಂ ಕೋರ್ಟ್ ಆದೇಶಿಸಿದೆ.

ಇದುವರೆಗೆ ಹೊಸ ಕಾರುಗಳು ಮೂರು ವರ್ಷ ಮತ್ತು ದ್ವಿಚಕ್ರ ವಾಹನಗಳು ಐದು ವರ್ಷ ಥರ್ಡ್‌ ಪಾರ್ಟಿ ವಿಮೆ ಹೊಂದುವುದು ಕಡ್ಡಾಯವಾಗಿತ್ತು. ಈ ಅವಧಿಯನ್ನು ಸುಪ್ರೀಂ ಕೋರ್ಟ್‌ ಒಂದು ವರ್ಷ ಹೆಚ್ಚಿಸಿದೆ.

ಏನಿದು 1996ರ ಪ್ರಕರಣ?

ಈ ಪ್ರಕರಣವು 1996ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಅಪಘಾತವೊಂದಕ್ಕೆ ಸಂಬಂಧಿಸಿದ್ದಾಗಿದೆ. ಸಾಗರೋತ್ಪನ್ನ ಉದ್ಯಮಿ ರಾಮು ಎಂಬುವರು ಸಂಚರಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅವರು ಮೃತಪಟ್ಟಿದ್ದರು. ಆ ವೇಳೆ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯು ರಾಮು ಅವರ ಕುಟುಂಬಕ್ಕೆ ಪರಿಹಾರ ನಿರಾಕರಿಸಿತ್ತು. ಆದರೆ, ತೆಲಂಗಾಣ ಹೈಕೋರ್ಟ್ ಈ ತೀರ್ಪನ್ನು ವಜಾಗೊಳಿಸಿ ಪರಿಹಾರ ನೀಡುವಂತೆ ಆದೇಶಿಸಿತ್ತು. ಪ್ರಸ್ತುತ ಸುಪ್ರೀಂ ಕೋರ್ಟ್ ಕೂಡ ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿದಿದ್ದು, ವಿಮಾ ಕಂಪನಿಯೇ ಪರಿಹಾರ ನೀಡಲು ಬಾಧ್ಯಸ್ಥ ಎಂದು ಒತ್ತಿ ಹೇಳಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್ 18ಕ್ಕೆ ನಿಗದಿಪಡಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries