ರಾಂಚಿ: ಜಾರ್ಖಂಡ್ ಲೋಕ ಸೇವಾ ಆಯೋಗ (ಜೆಪಿಎಸ್‌ಸಿ), ಜಾರ್ಖಂಡ್ ಸಿಬ್ಬಂದಿ ನೇಮಕ ಆಯೋಗ(ಜೆಎಸ್‌ಎಸ್‌ಸಿ) ನಡೆಸಿರುವ ಹಾಗೂ ಇತರ ನೇಮಕಾತಿ ಪರೀಕ್ಷೆಗಳಲ್ಲಿ ನಡೆದಿವೆ ಎನ್ನಲಾದ ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಭಾನುವಾರ ಐದನೇ ದಿನ ಪೂರೈಸಿತು.
ನಗರದ ಕ್ರೀಡಾಂಗಣವೊಂದರಲ್ಲಿ ಜುಲೈ 29ರಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿರುವ ವಿದ್ಯಾರ್ಥಿಗಳು, ನೇಮಕಾತಿ ಪರೀಕ್ಷೆ ನಡೆಸುವ ಸಂಸ್ಥೆಗಳಲ್ಲಿ ಸುಧಾರಣೆ ತರಬೇಕು ಎಂದೂ ಆಗ್ರಹಿಸಿದ್ದಾರೆ.
'ಜೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳ ವೇಳೆ ಅನೇಕ ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಈ ಬಾರಿ ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳೇ ಸೋರಿಕೆಯಾಗಿವೆ. ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರು ಸಿಐಡಿ ತನಿಖೆಗೆ ಆದೇಶಿಸಿದ್ದು, ಸಿಐಡಿ ತನಿಖೆಯಲ್ಲಿ ನಂಬಿಕೆ ಇಲ್ಲ. ಹೀಗಾಗಿ, ಈ ಅಕ್ರಮ ಕುರಿತ ತನಿಖೆಯನ್ನು ಸಿಬಿಐಗೆ ವಹಿಸಬೇಕು' ಎಂದು ಉದ್ಯೋಗಾಕಾಂಕ್ಷಿ ರಾಹುಲ್‌ಕುಮಾರ್ ಕ್ರಾಂತಿ ಹೇಳಿದರು.

