ಮುಂಬೈ: ಮಹಾರಾಷ್ಟ್ರದ ಯಾತ್ರಿಕರು, ಪ್ರವಾಸಿಗರನ್ನೊಳಗೊಂಡ 69 ಜನರ ತಂಡವು ಶನಿವಾರ ತಡರಾತ್ರಿ ಕೊಡಾರಿ ವಲಸೆ ಕೇಂದ್ರದ ಮೂಲಕ ಚೀನಾ ಗಡಿ ದಾಟಿ ನೇಪಾಳದ ಸುರಕ್ಷಿತ ಪ್ರದೇಶಕ್ಕೆ ತಲುಪಿದೆ. ಸೋಮವಾರ (ಆಗಸ್ಟ್ 31ರ) ಸಂಜೆ ವೇಳೆಗೆ ಮುಂಬೈಗೆ ಮರಳುವ ಸಾಧ್ಯತೆ ಇದೆ.
ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರವು (ಎಸ್‌ಇಒಸಿ) ಪ್ರವಾಹದಲ್ಲಿ ಸಿಲುಕಿರುವ ಮಹಾರಾಷ್ಟ್ರದ 404 ನಾಗರಿಕರನ್ನು ಪಟ್ಟಿ ಮಾಡಿದೆ. ಅವರಲ್ಲಿ 262 ಪ್ರವಾಸಿಗರು ನೇಪಾಳ ಇಲ್ಲವೇ ಚೀನಾದಲ್ಲಿ ಇನ್ನೂ ಸಿಲುಕಿಕೊಂಡಿದ್ದಾರೆ. ಈಗಾಗಲೇ 142 ಜನರು ಸುರಕ್ಷಿತವಾಗಿ ವಾಪಸ್ ಆಗಿದ್ದಾರೆ. ಇದೀಗ 69 ಮಂದಿಯನ್ನು ಸುರಕ್ಷಿತವಾಗಿ ಕರೆತರಲಾಗುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ವಿಪತ್ತು ನಿರ್ವಹಣಾ ಸಚಿವ ಗಿರೀಶ್ ಮಹಾಜನ್ ಅವರು ರಕ್ಷಣಾ ಕಾರ್ಯಾಚರಣೆ ಮೇಲೆ ನಿಗಾ ಇರಿಸಿದ್ದು, ದುರಂತ ಸಂಭವಿಸಿರುವ ಸ್ಥಳದಲ್ಲಿನ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ನೇಪಾಳ, ಚೀನಾದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಮಹಾರಾಷ್ಟ್ರದ ನಿವಾಸಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪರಿಶೀಲನೆ ನಡೆಸಲು ಮತ್ತು ಅವರನ್ನು ರಕ್ಷಿಸಿ ವಾಪಸ್ ಕರೆತರಲು ನೆರವಾಗುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿಯಂತ್ರಣ ಕೊಠಡಿಯೊಂದಿಗೆ ಎಸ್‌ಇಒಸಿ ಸಮನ್ವಯ ಸಾಧಿಸುತ್ತಿದೆ.

