ಹಾಪೂರ್: ನಿಶ್ಚಿತಾರ್ಥ ರದ್ದಾಗಿದ್ದಕ್ಕೆ ಯುವತಿ ಹಾಗೂ ಆಕೆಯ ತಂಗಿಯ ಮೇಲೆ ಆಯಸಿಡ್ ಎರಚಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ಹಾಪೂರ್‌ನ ಸಿಂಭಾವಲಿಯಲ್ಲಿ ನಡೆದಿದೆ. ಆರೋಪಿಯನ್ನು ಹರ್ಷ್ ಭಾಟಿ ಎಂದು ಗುರುತಿಸಲಾಗಿದೆ. ಹರ್ಷ್ ಮದ್ಯ ಹಾಗೂ ಮಾದಕ ದ್ರವ್ಯದ ವ್ಯಸನಿಯಾಗಿದ್ದ.
ಈ ವಿಷಯ ತಿಳಿದ ಯುವತಿಯ ಪೋಷಕರು ಮದುವೆ ಪ್ರಸ್ತಾಪವನ್ನು ರದ್ದುಗೊಳಿಸಿದ್ದರು.
ಇದರಿಂದ ಕೆರಳಿದ ಹರ್ಷ್, ಶನಿವಾರ ರಾತ್ರಿ ಆಯಸಿಡ್ ಬಾಟಲಿ ಸಮೇತ ಯುವತಿಯ ಮನೆಗೆ ಬಂದಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆಯೇ ಯುವತಿ ಮೇಲೆ ಆಯಸಿಡ್ ಎರಚಿದ್ದಾನೆ. ಈ ವೇಳೆ ಆಕೆಯನ್ನು ರಕ್ಷಿಸಲು ಬಂದ ತಂಗಿಯ ಮೇಲೆಯೂ ಆಯಸಿಡ್ ಚೆಲ್ಲಿದ್ದಾನೆ.
ಯುವತಿಯರ ಚೀರಾಟ ಕೇಳಿ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು, ಓಡಿಹೋಗಲು ಯತ್ನಿಸುತ್ತಿದ್ದ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ತೀವ್ರ ಗಾಯಗೊಂಡಿರುವ ಇಬ್ಬರೂ ಸಹೋದರಿಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತರ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

