ನವದೆಹಲಿ: ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕದ (ಎನ್‌ಸಿಆರ್‌ಬಿ) ಇತ್ತೀಚಿನ ವರದಿಯಂತೆ ದೇಶಾದ್ಯಂತ ಒಟ್ಟು 819 ಮಾನವ ಕಳ್ಳಸಾಗಣೆ ತಡೆ ಘಟಕಗಳನ್ನು (ಎಎಚ್‌ಟಿಯು) ಸ್ಥಾಪಿಸಲಾಗಿದೆ ಮತ್ತು ಕೇಂದ್ರ ಸರಕಾರವು ಮಾನವ ಕಳ್ಳಸಾಗಣೆಯನ್ನು ತಡೆಯಲು ತಮ್ಮ ನಡುವಿನ ಸಮನ್ವಯವನ್ನು ಬಲಪಡಿಸುವಂತೆ ರಾಜ್ಯಗಳಿಗೆ ಸೂಚಿಸಿದೆ ಎಂದು ಸಹಾಯಕ ಗೃಹಸಚಿವ ಬಂಡಿ ಸಂಜಯ ಕುಮಾರ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, 'ಪೋಲೀಸ್' ಮತ್ತು 'ಸಾರ್ವಜನಿಕ ಸುವ್ಯವಸ್ಥೆ' ರಾಜ್ಯ ಪಟ್ಟಿಗೆ ಸೇರಿರುವ ವಿಷಯಗಳಾಗಿರುವುದರಿಂದ ಅಂತರ್-ರಾಜ್ಯ ಸಮನ್ವಯ ಸಾಧನೆ ಮತ್ತು ಪ್ರಮಾಣಿತ ಕಾರ್ಯಾಚರಣೆ ವಿಧಾನಗಳನ್ನು ಸ್ಥಾಪನೆ ಸೇರಿದಂತೆ ಮಾನವ ಕಳ್ಳಸಾಗಣೆಯನ್ನು ತಡೆಯುವ ಪ್ರಾಥಮಿಕ ಜವಾಬ್ದಾರಿಯು ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ್ದಾಗಿದೆ ಎಂದು ಹೇಳಿದರು.
ಗೃಹ ಸಚಿವಾಲಯವು ಕಾಲಕಾಲಕ್ಕೆ ಸೂಕ್ತ ಸಲಹೆಗಳನ್ನು ನೀಡುವ ಮೂಲಕ ರಾಜ್ಯಗಳ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಸಚಿವರು ತಿಳಿಸಿದರು.
ಕೇಂದ್ರ ಸರಕಾರವು ಮಾನವ ಕಳ್ಳಸಾಗಣೆಗೆ ಸಂಬಂಧಿಸಿದ ಇತ್ತೀಚಿನ ಉಪಕ್ರಮಗಳು ಮತ್ತು ಬೆಳವಣಿಗೆಗಳ ಬಗ್ಗೆ ಪೋಲೀಸ್ ಹಾಗೂ ಕಾನೂನು ಅಧಿಕಾರಿಗಳಿಗೆ ಅರಿವು ಮೂಡಿಸಲು ರಾಜ್ಯಮಟ್ಟದ ಸಮ್ಮೇಳನಗಳು ಮತ್ತು ನ್ಯಾಯಾಂಗ ಗೋಷ್ಠಿಗಳನ್ನು ಆಯೋಜಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೆರವಾಗುತ್ತಿದೆ ಎಂದ ಅವರು, ಪೋಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಬ್ಯೂರೋ ತನ್ನ ಘಟಕಗಳ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಎಎಚ್‌ಟಿಯು ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಿದೆ ಎಂದು ತಿಳಿಸಿದರು.

