ನವದೆಹಲಿ: ಪಶ್ಚಿಮ ಏಶ್ಯ ಸಂಘರ್ಷವು, ಜಾಗತಿಕವಾಗಿ ಇಂಧನ ಬಿಕ್ಕಟನ್ನು ಸೃಷ್ಟಿಸಿರುವ ನಡುವೆ, ಭಾರತವು ತೈಲ ಹಾಗೂ ನೈಸರ್ಗಿಕ ಅನಿಲ ನಿಕ್ಷೇಪಗಳ ಅನ್ವೇಷಣೆಗಾಗಿ 84,084 ಕೋಟಿ ರೂ.ಮೊತ್ತದ ಯೋಜನೆಯನ್ನು ಪ್ರಕಟಿಸಿದೆ. 'ಸಮುದ್ರಮಂಥನ' ಎಂದು ಹೆಸರಿಡಲಾದ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ಶುಕ್ರವಾರ ಅನುಮೋದನೆ ನೀಡಿದೆ.
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ಸಮುದ್ರಮಂಥನ ಯೋಜನೆಯು 2030-31ನೇ ಹಣಕಾಸು ವರ್ಷದಲ್ಲಿ ಜಾರಿಗೆ ಬರಲಿದ್ದು, ದೇಶದ ವಿಶಾಲವಾದ ಸಾಗರಪ್ರದೇಶದಲ್ಲಿ ಹುದುಗಿರುವ ಇಂಧನ ಸಂಪನ್ಮೂಲಗಳನ್ನು ಉತ್ಖನನ ಮಾಡುವ ಉದ್ದೇಶವನ್ನು ಹೊಂದಿದೆ.
ಸಮುದ್ರ ಮಂಥನ ಯೋಜನೆಯ ಮೂಲಕ ಭಾರತದ ತೈಲ ಸಂಪನ್ಮೂಲಗಳಿಗೆ 600 ದಶಲಕ್ಷ ಟನ್ ಮೆಟ್ರಿಕ್ ಟನ್ ಅಧಿಕ ತೈಲ ಸಂಗ್ರಹವು ಸೇರ್ಪಡೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ಸಾಗರಪ್ರದೇಶದಲ್ಲಿ ಇಂಧನ ಅನ್ವೇಷಣೆ ಚಟುವಟಿಕೆ ಗಣನೀಯವಾಗಿ ವಿಸ್ತರಣೆಗೊಳ್ಳಲಿದೆ ಹಾಗೂ ತೈಲ ಹಾಗೂ ನೈಸರ್ಗಿಕ ಅನಿಲ ಉತ್ಪಾದನೆ ಹೆಚ್ಚಲಿದೆಯೆಂದು ನಿರೀಕ್ಷಿಸಲಾಗಿದೆ.
ಭಾರತವು ತನ್ನ ಒಟ್ಟು ತೈಲ ಅವಶ್ಯಕತೆಯ ಶೇ.90ರಷ್ಟನ್ನು ಆಮದು ಮಾಡಿಕೊಳ್ಳುತ್ತಿದೆ. ಪಶ್ಚಿಮ ಏಶ್ಯಾ ಸಂಘರ್ಷದಿಂದಾಗಿ ಹಾರ್ಮುಝ್ ಜಲಸಂಧಿ, ಕೆಂಪುಸಮುದ್ರ ಹಾಗೂ ಕಪ್ಪು ಸಮುದ್ರ ಮಾರ್ಗಗಳಲ್ಲಿ ನಿರ್ಬಂಧಗಳು ಉಂಟಾಗಿರುವ ಹಿನ್ನೆಲೆಯಲ್ಲಿ, ಭಾರತವು ತೈಲ ಹಾಗೂ ನೈಸರ್ಗಿಕ ಅನಿಲದ ಅವಶ್ಯಕತೆಗಳಿಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಯತ್ನಿಸುತ್ತಿದೆ.

