ಗುವಾಹಟಿ: ಅಸ್ಸಾಂನ ಶಿವಸಾಗರದಲ್ಲಿ ರವಿವಾರ ಪ್ರವಾಹಕ್ಕೆ ಸಿಲುಕಿ ಮತ್ತೆ ಮೂವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಅಸ್ಸಾಂ ಪ್ರವಾಹದಿಂದ ಸಾವನ್ನಪ್ಪಿದವರ ಒಟ್ಟು ಸಂಖ್ಯೆ ಸೋಮವಾರ 82ಕ್ಕೆ ಏರಿಕೆಯಾಗಿದೆ.
7 ಜಿಲ್ಲೆಗಳಲ್ಲಿ 1.78 ಲಕ್ಷಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿದ್ದು, 160ಕ್ಕೂ ಅಧಿಕ ಗ್ರಾಮಗಳು ಇನ್ನೂ ಜಲಾವೃತವಾಗಿವೆ.
ಪ್ರವಾಹ ಪರಿಸ್ಥಿತಿ ಸ್ಪಲ್ಪ ಸುಧಾರಿಸಿದ್ದು, ಸಂತ್ರಸ್ತರ ಸಂಖ್ಯೆ 1.92 ಲಕ್ಷದಿಂದ 1.78 ಲಕ್ಷಕ್ಕೆ ಇಳಿಕೆಯಾಗಿದೆ. ಆದರೂ ಗೋಲಾಘಾಟ್, ಶಿವಸಾಗರ್, ಚರೈದೇವ್, ಜೋರ್ಹಾಟ್, ಬಜಾಲಿ, ಧೇಮಾಜಿ ಮತ್ತು ಸೋನಿತ್‌ಪುರ ಜಿಲ್ಲೆಗಳ 349 ಗ್ರಾಮಗಳು ಇನ್ನೂ ಸಂತ್ರಸ್ತವಾಗಿವೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ತಿಳಿಸಿದೆ.
ಚರೈದೇವ್ ಜಿಲ್ಲೆ ಅತ್ಯಂತ ತೀವ್ರವಾಗಿ ಬಾಧಿತವಾಗಿದೆ. ಚರೈದೇವ್ ಜಿಲ್ಲೆಯಲ್ಲಿ 75,000ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಶಿವಸಾಗರ್‌ನಲ್ಲಿ 58,000ಕ್ಕೂ ಅಧಿಕ ಜನರು ಸಂತ್ರಸ್ತರಾಗಿದ್ದಾರೆ. ಸುಮಾರು 10,060 ಹೆಕ್ಟೇರ್ ಬೆಳೆ ನಾಶವಾಗಿದೆ. ಜೊತೆಗೆ ಸಾವಿರಾರು ಜಾನುವಾರುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಅದು ಹೇಳಿದೆ.
ಪ್ರಸ್ತುತ 44 ಪರಿಹಾರ ಕೇಂದ್ರಗಳು ಸುಮಾರು 15,000 ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ. ಮತ್ತೆ 17 ಪರಿಹಾರ ವಿತರಣಾ ಕೇಂದ್ರಗಳು 5,500ಕ್ಕೂ ಅಧಿಕ ನಿವಾಸಿಗಳಿಗೆ ನೆರವು ನೀಡುತ್ತಿವೆ.
ಜುಲೈ 19ರಂದು ಪ್ರವಾಹದ ನೀರು ವೇಗವಾಗಿ ಏರಿದಾಗ ಶಿವಸಾಗರ ಜಿಲ್ಲೆಯ ನೇಪಾಳಿ ಖುತಿ ಪ್ರದೇಶದಲ್ಲಿ ಸ್ಥಳೀಯ ಗ್ರಾಮಸ್ಥರು ಆರು ದೇಶೀ ದೋಣಿಗಳನ್ನು ಬಳಸಿ ಐದು ಗ್ರಾಮಗಳ 1,000ಕ್ಕೂ ಅಧಿಕ ಜನರನ್ನು ರಕ್ಷಿಸಿದರು.
ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಅತ್ಯಂತ ಹೆಚ್ಚು ಹಾನಿಗೀಡಾದ ಜಿಲ್ಲೆಗಳಿಗೆ ರವಿವಾರ ಪ್ರವಾಸ ಕೈಗೊಂಡರು. ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಆಗಸ್ಟ್ 9ರಿಂದ ಆರಂಭವಾಗಲಿರುವ ಸಮಗ್ರ ಹಾನಿ ಮೌಲ್ಯ ಮಾಪನ ಪ್ರಕ್ರಿಯೆಗೆ ಸಿದ್ಧತೆ ನಡೆಸಿದರು.
ಶಾಲೆಗಳು ಆಗಸ್ಟ್ 10ರಂದು ಪುನಾರಂಭಗೊಳ್ಳುವ ಮೊದಲು ಶಿಕ್ಷಣ ಸಂಸ್ಥೆಗಳಿಗೆ ಆಗಿರುವ ಹಾನಿಯನ್ನು ನಿರ್ಣಯಿಸಲು, ಪರಿಹಾರ ಕಿಟ್‌ಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಹಾನಿಗೊಳಗಾದ ವೈಷ್ಣವ ಪ್ರಾರ್ಥನಾ ಕೇಂದ್ರಗಳನ್ನು ಪುನಶ್ಚೇತನಗೊಳಿಸಲು ಯೋಜನೆಗಳನ್ನು ರೂಪಿಸುವಂತೆ ಸರಕಾರ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ನೆರೆ ಪರಿಹಾರಕ್ಕೆ ಕೇಂದ್ರದಿಂದ 379 ಕೋಟಿ ರೂ. ಮಂಜೂರು:
ಅಸ್ಸಾಂ ಪ್ರವಾಹ ಪರಿಹಾರಕ್ಕಾಗಿ ಕೇಂದ್ರ ಸರಕಾರ ರಾಜ್ಯ ವಿಪತ್ತು ಸ್ವಂದನಾ ನಿಧಿ (ಎಸ್‌ಡಿಆರ್‌ಎಫ್) ಅಡಿಯಲ್ಲಿ 379.35 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.
ಅಸ್ಸಾಂ ಸರಕಾರದಿಂದ ಪರಿಹಾರ ಬಿಡುಗಡೆ:
ಅಸ್ಸಾಂ ಸರಕಾರ ಸೋಮವಾರ ಪ್ರವಾಹ ಸಂತ್ರಸ್ತ 75,000 ಕುಟುಂಬಗಳಿಗೆ ಮಧ್ಯಂತರ ಪರಿಹಾರದ ಮೊದಲ ಕಂತು ತಲಾ 15,000 ರೂ.ಗಳನ್ನು ಬಿಡುಗಡೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ದಿಬ್ರುಗಢದಲ್ಲಿ ಮಧ್ಯಂತರ ಪರಿಹಾರದ ಮೊದಲ ಕಂತನ್ನು ಬಿಡುಗಡೆ ಮಾಡಿದರು. ಶಿವಸಾಗರ್, ಚರೈದೇವ್, ಜೋರ್ಹಾತ್ ಮತ್ತು ಗೋಲಾಘಾಟ್ ಜಿಲ್ಲೆಗಳಲ್ಲಿ ತೀವ್ರ ಸಂತ್ರಸ್ತರಾದ ಪ್ರತಿ ಕುಟುಂಬಗಳು ತಲಾ 15,000 ರೂ. ಪಡೆಯಲಿವೆ. ಪ್ರತಿ ಕುಟುಂಬದ ಒಟ್ಟು ಪರಿಹಾರ ಮೊತ್ತ 75,000 ರೂ.ಗಳ ವರೆಗೆ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

