HEALTH TIPS

ಅಂಗಡಿಮೊಗರು ಶಾಲೆಯ ಶಿಲಾಫಲಕದಲ್ಲಿ ಮರೆಮಾಚಿದ್ದ ಜಿ.ಪಂ. ಸದಸ್ಯರ ಹೆಸರು ಪುನಃ ಸೇರ್ಪಡೆ

ಕುಂಬಳೆ: ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಸ್ಥಾಪಿಸಲಾಗಿದ್ದ ಶಿಲಾಫಲಕದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅವರ ಹೆಸರನ್ನು ಮರೆಮಾಚಿದ ಪ್ರಕರಣಕ್ಕೆ ಇದೀಗ ತೆರೆ ಬಿದ್ದಿದೆ. ಜಿಲ್ಲಾ ಪಂಚಾಯತಿ ಸದಸ್ಯರ ಹೆಸರು ನಮೂದಿಸಿ ಶಿಲಾಫಲಕವನ್ನು ಪುನಃ ಸ್ಥಾಪಿಸಲಾಗಿದೆ.


ಕಾಸರಗೋಡು ಅಭಿವೃದ್ಧಿ ಯೋಜನೆಯಡಿ ಅಂಗಡಿಮೊಗರು ಶಾಲೆಗೆ ನಿರ್ಮಿಸಲಾದ ನೂತನ ಕಟ್ಟಡವನ್ನು ಕಳೆದ ಮಾರ್ಚ್ 3ರಂದು ಅಂದಿನ ಶಿಕ್ಷಣ ಸಚಿವ ಶಿವನ್‍ಕುಟ್ಟಿ ಉದ್ಘಾಟಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಗಣ್ಯರ ಹೆಸರುಗಳನ್ನು ಉಲ್ಲೇಖಿಸಿ ಶಾಲಾ ಆವರಣದಲ್ಲಿ ಶಿಲಾಫಲಕವನ್ನು ಸ್ಥಾಪಿಸಲಾಗಿತ್ತು. ಅದರಲ್ಲಿ ಪುತ್ತಿಗೆ ವಿಭಾಗದ ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ್ ಜೆ.ಎಸ್. ಅವರ ಹೆಸರನ್ನೂ ದಾಖಲಿಸಲಾಗಿತ್ತು.

ಆದರೆ ಸುಮಾರು ಒಂದು ತಿಂಗಳ ಹಿಂದೆ ಕಿಡಿಗೇಡಿಗಳು ಶಿಲಾಫಲಕದಲ್ಲಿದ್ದ ಸೋಮಶೇಖರ್ ಜೆ.ಎಸ್. ಅವರ ಹೆಸರನ್ನು ಮಾತ್ರ ಮರೆಮಾಚಿರುವುದು ಬೆಳಕಿಗೆ ಬಂದಿತ್ತು. ಈ ಘಟನೆ ತೀವ್ರ ಚರ್ಚೆಗೆ ಗ್ರಾಸವಾಗುವುದರೊಂದಿಗೆ ರಾಜಕೀಯ ವಲಯದಲ್ಲಿಯೂ ಆಕ್ರೋಶಕ್ಕೆ ಕಾರಣವಾಗಿತ್ತು.

ಘಟನೆಯನ್ನು ಖಂಡಿಸಿ ಸೋಮಶೇಖರ್ ಜೆ.ಎಸ್. ಅವರು ಜಿಲ್ಲಾ ಪಂಚಾಯತ್ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಶಿಕ್ಷಣ ಇಲಾಖೆ ಹಾಗೂ ಶಾಲಾ ಅಧಿಕಾರಿಗಳಿಂದ ವರದಿ ಪಡೆದು, ಶಿಲಾಫಲಕವನ್ನು ಸೂಕ್ತ ರೀತಿಯಲ್ಲಿ ಪುನಃ ಸ್ಥಾಪಿಸುವಂತೆ ನಿರ್ದೇಶನ ನೀಡಲಾಗಿತ್ತು.

ಇದೀಗ ಶಾಲಾ ಆವರಣದಲ್ಲಿ ಸೋಮಶೇಖರ್ ಜೆ.ಎಸ್. ಅವರ ಹೆಸರನ್ನು ಒಳಗೊಂಡಂತೆ ಶಿಲಾಫಲಕವನ್ನು ಪುನಃ ಸ್ಥಾಪಿಸಲಾಗಿದೆ. ಅಲ್ಲದೆ, ಶಾಲಾ ಆವರಣದಲ್ಲಿ ಇಂತಹ ಕಿಡಿಗೇಡಿ ಕೃತ್ಯಗಳು ಮರುಕಳಿಸದಂತೆ ನಿಗಾ ವಹಿಸಲು ಶೀಘ್ರದಲ್ಲೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಹಿಂದೆ ಎಣ್ಮಕಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಜನಪರ ಕಾರ್ಯಯೋಜನೆಗಳ ಮೂಲಕ ಗುರುತಿಸಿಕೊಂಡಿದ್ದ ಸಕ್ರಿಯ ಯುವ ರಾಜಕಾರಣಿ ಸೋಮಶೇಖರ್ ಜೆ.ಎಸ್. ಅವರ ಸಾಮಾಜಿಕ ಮತ್ತು ರಾಜಕೀಯ ಬೆಳವಣಿಗೆಯನ್ನು ಸಹಿಸದವರೇ ಈ ಕೃತ್ಯ ಎಸಗಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದ್ದವು. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಶಿಲಾಫಲಕವನ್ನು ಪುನಃ ಸ್ಥಾಪಿಸುವ ಮೂಲಕ ವಿವಾದಕ್ಕೆ ಅಂತ್ಯ ಹಾಡಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಲಾ ಆವರಣದಲ್ಲಿ ಸೂಕ್ತ ಭದ್ರತಾ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries