ಮಧುರೈ: ತಮಿಳುನಾಡಿನ ಪೂರ್ವಜರು ಶ್ರೀಲಂಕಾ ಮತ್ತು ದಕ್ಷಿಣ ಏಷ್ಯಾದ ಜೊತೆಗೆ ಆನುವಂಶಿಕ ಸಂಬಂಧವನ್ನು ಹೊಂದಿದ್ದರು. 75,000ಕ್ಕೂ ಅಧಿಕ ಡಿಎನ್‌ಎ ಮಾದರಿಗಳನ್ನು ಈ ಅಧ್ಯಯನಕ್ಕೆ ಒಳಪಡಿಸಿ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಜೆನೆಟಿಕ್ಸ್ ವಿಭಾಗದ ಮುಖ್ಯಸ್ಥ ಪ್ರೊ.ಜಿ. ಕುಮಾರೇಶನ್ ತಿಳಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಆದಿಚನಲ್ಲೂರು ಉತ್ಖನನ ತಾಣದಿಂದ ಸುಮಾರು 9,000 ಮಾದರಿಗಳನ್ನು ಹಾಗೂ ಶಿವಗಲೈ ತಾಣದಿಂದ 6,000 ಜೆನೆಟಿಕ್ ಗುರುತುಗಳನ್ನು ಪರೀಕ್ಷಿಸಲಾಗಿದೆ. ಮಧುರೈನ ಕಾಮರಾಜ್ ವಿಶ್ವವಿದ್ಯಾಲಯದ ತಳಿಶಾಸ್ತ್ರ ವಿಭಾಗದ 'ಪ್ರಾಚೀನ ಡಿಎನ್‌ಎ ಪ್ರಯೋಗಾಲಯ'ದಲ್ಲಿ ಈ ಬಗ್ಗೆ ಅಧ್ಯಯನ ನಡೆಸಲಾಗಿದೆ ಎಂದು ಸಂಶೋಧಕರು ಮಾಹಿತಿ ಹಂಚಿಕೊಂಡಿದ್ದಾರೆ.
ಡಿಸೆಂಬರ್‌ನಲ್ಲಿ ಈ ಸಂಶೋಧನೆಗೆ ಸಂಬಂಧಿಸಿ ಪೀರ್-ರಿವ್ಯೂಡ್ ಅಂತರರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟವಾಗಲಿದೆ.
ಈ ಸಂಶೋಧನೆಯಲ್ಲಿ ಪ್ರಾಚೀನ ತಮಿಳು ನಾಗರಿಕತೆಯ ಆನುವಂಶಿಕ ಮೂಲ, ರಾಗಿ ಮತ್ತು ಧಾನ್ಯಗಳ ಬಳಕೆ, ಆಹಾರ ಪದ್ಧತಿ, ಜವಳಿ ಕೈಗಾರಿಕೆ ಸೇರಿ ಅನೇಕ ಸಾಮಾಜಿಕ ಅಂಶಗಳನ್ನು ಒಳಗೊಂಡ ವಿವರಗಳನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಈ ಸಂಶೋಧನೆಗೆ ಮನುಷ್ಯನ ಡಿಎನ್‌ಎ ಮಾತ್ರವಲ್ಲದೆ ಸಾಕುಪ್ರಾಣಿ ಮತ್ತು ಜಾನುವಾರುಗಳ ಡಿಎನ್‌ಎ ಅಧ್ಯಯನಕ್ಕೆ ಒಳಪಡಿಸಲಾಗಿದೆ ಎಂದು ಜಿ. ಕುಮಾರೇಶನ್ ಮಾಹಿತಿ ನೀಡಿದ್ದಾರೆ.

