ಉಪ್ಪಳ: ಕೃತಕ ಬುದ್ಧಿಮತ್ತೆ(ಎ.ಐ)ಯಿಂದ ಜಗತ್ತಿನಾದ್ಯಂತ ಸೇವಾ ಕ್ಷೇತ್ರ ಹಾಗೂ ಐಟಿ ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಕ್ಕೆ ಕಡಿತವುಂಟಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿ ಕ್ಷೇತ್ರ ಹೆಚ್ಚು ಆಶಾದಾಯಕವಾಗಿ ಮೂಡಿಬರುತ್ತಿರುವುದಾಗಿ ಮಂಜೇಶ್ವರ ಬ್ಲೋಕ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಙಲ್ ತಿಳಿಸಿದ್ದಾರೆ.
ಅವರು ಪೈವಳಿಕೆ ಗ್ರಾಮ ಪಂಚಾಯಿತಿ ಹಾಗೂ ಪೈವಳಿಕೆ ಕೃಷಿಭವನದ ಸಹಯೋಗದಲ್ಲಿ ಸಿಂಹ ಮಾಸದ ಮೊದಲ ದಿನವಾದ ಸೋಮವಾರ ನಡೆದ ಕೃಷಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಕೃಷಿಯು ಭಾರತದ ಆರ್ಥಿಕ ವ್ಯವಸ್ಥೆಯ ಬೆನ್ನೆಲುಬಾಗಿದ್ದು, ಇಂದಿಗೂ ಭಾರತದ ಬಹುಪಾಲು ಜನರು ತಮ್ಮ ಜೀವನೋಪಾಯಕ್ಕಾಗಿ ಕೃಷಿ ಕ್ಷೇತ್ರವನ್ನೇ ಅವಲಂಬಿಸಿದ್ದಾರೆ . ಕೃಷಿಯನ್ನು ನೆಚ್ಚಿ ಮುನ್ನಡೆದವರು ಎಂದಿಗೂಜೀವನದಲ್ಲಿ ವಿಫಲರಾಗಿಲ್ಲ ಎಂದು ತಿಳಿಸಿದರು.
ಈ ಸಂದರ್ಭ ಕೃಷಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಗತಿಪರ ಕೃಷಿಕರನ್ನು ಶಾಲು ಹೊದಿಸಿ ಸನ್ಮಾನಿಸಿದರು. ಸನ್ಮಾನಿತರಲ್ಲಿ ಹನ್ನೆರಡರ ಹರೆಯದ ಬಾಲ ರೈತ ಮಹಮ್ಮದ್ ರೈಹಾನ್ ಎಲ್ಲರ ಗಮನ ಸೆಳೆದರು.
ಪೈವಳಿಕೆ ಗ್ರಾಪಂ ಅಧ್ಯಕ್ಷೆ ಬದರುನ್ನಿಸಾ ಪಿ. ಅಧ್ಯಕ್ಷತೆ ವಹಿಸಿದ್ದರು. ಹಿರಿಯ ರೈತ ಲಿಗೋರಿ ಡಿಸೋಜಾ, ಗ್ರಾಪಂ ಉಪಾಧ್ಯಕ್ಷ ರಾಘವೇಂದ್ರ ಭಟ್, ಜಿಲ್ಲಾ ಪಂಚಾಯತ್ ಸದಸ್ಯ ಸೋಮಶೇಖರ ಜೆ.ಎಸ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಮೋಹನ್ ರೈ, ಪೈವಳಿಕೆ ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಫಾತಿಮತ್ ಸುನೀನ, ಶ್ರೀನಿವಾಸ ಕೆ.ಎಚ್., ಸುಮನ ಜಿ. ಭಟ್, ಬ್ಲಾಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಖ್ ಚಿಪ್ಪಾರ್, ವಿವಿಧ ರಾಝಕೀಯ ಪಕ್ಷಗಳ ಪ್ರತಿನಿಧಿಗಳಾದ ವಸಂತನ್ ಮಾಸ್ಟರ್, ಅಜೀಜ್ ಕಲಾಯಿ, ಚಂದ್ರ ನಾಯಕ್, ಶಂಕರ ಭಟ್, ಪೈವಳಿಕೆ ಗ್ರಾಮ ಪಂಚಾಯತ್ ಕಾರ್ಯದರ್ಶಿ ಶ್ರೀರಾಜ್ ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಡಾ. ಲಕ್ಷ್ಮಿ ಮುರಳೀಕೃಷ್ಣ ಸ್ವಾಗತಿಸಿದರು. ಸಹಾಯಕ ಕೃಷಿ ಅಧಿಕಾರಿ ವಿನೋದ್ ಪಿ.ವಿ. ವಂದಿಸಿದರು.



