ಕೊಚ್ಚಿ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ಉಮರ್ ಫಾರೂಕ್‍ನನ್ನು ಕೊಚ್ಚಿಯಲ್ಲಿ ಎನ್.ಐ.ಎ.ಗುರುವಾರ ವಶಕ್ಕೆ ತೆಗೆದುಕೊಂಡಿದೆ. ಆತ ಕಳೆದ ಮೂರು ವರ್ಷಗಳಿಂದ ಕೊಚ್ಚಿಯಲ್ಲಿ ತಲೆಮರೆಸಿಕೊಂಡಿದ್ದ. ಇದರೊಂದಿಗೆ, ಪ್ರಕರಣದಲ್ಲಿ ಬಂಧಿಸಲಾದ ಜನರ ಸಂಖ್ಯೆ 25 ಕ್ಕೆ ತಲುಪಿದೆ.
ಉಮರ್ ಫಾರೂಕ್ ಬಗ್ಗೆ ಮಾಹಿತಿ ನೀಡಿದವರಿಗೆ 4 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್.ಐ.ಎ. ಘೋಷಿಸಿತ್ತು. ಪ್ರಕರಣದಲ್ಲಿ ಇನ್ನೂ ಇಬ್ಬರನ್ನು ಬಂಧಿಸಬೇಕಾಗಿದೆ.
ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದೆ ಪಾಪ್ಯುಲರ್ ಫ್ರಂಟ್ ಕೈವಾಡವಿದೆ ಎಂದು ಪ್ರಕರಣ ಆರೋಪಿಸಿದೆ. ಎರಡು ವಾರಗಳ ಹಿಂದೆ, ಕೊಚ್ಚಿಯ ಪಲ್ಲುರುತಿಯಲ್ಲಿ ತಲೆಮರೆಸಿಕೊಂಡು ಷವರ್ಮಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿಯನ್ನು ಎನ್.ಐ.ಎ. ಪತ್ತೆ ಮಾಡಿತ್ತು.
ಉಮರ್ ಫಾರೂಕ್ ಹತ್ಯೆ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ. ಕೊಲೆಗೈದವರು ತಪ್ಪಿಸಿಕೊಳ್ಳಲು ವಾಹನವನ್ನು ವ್ಯವಸ್ಥೆ ಮಾಡಿದ್ದವ ಉಮರ್ ಫಾರೂಕ್ ಎಂದು ಎನ್.ಐ.ಎ.ಮೂಲಗಳು ಹೇಳಿವೆ.
ಬಂಧಿತ ಉಮರ್ ಫಾರೂಕ್ ನನ್ನು ಎನ್.ಐ.ಎ.ವಿಸ್ಕøತವಾಗಿ ವಿಚಾರಣೆ ನಡೆಸುತ್ತಿದೆ. ಪ್ರವೀಣ್ ನೆಟ್ಟಾರು 2022ರ ಜುಲೈ 26 ರಂದು ಕೊಲ್ಲಲ್ಪಟ್ಟರು. ಪ್ರವೀಣ್ ನೆಟ್ಟಾರು ಹತ್ಯೆಯ ನಂತರ, ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರ ಭುಗಿಲೆದ್ದಿತ್ತು.

