ನವದೆಹಲಿ: ಟಿವಿ ವಾಹಿನಿಗಳು ಕಾರ್ಯಕ್ರಮಗಳ ಪ್ರದರ್ಶನದ ವೇಳೆ ನಿಯಮಿತ ಮಧ್ಯಂತರದ ಅವಧಿಯಲ್ಲಿ ಮಾದಕ ದ್ರವ್ಯ ದುರುಪಯೋಗದ ಹಾನಿಕಾರಕ ಪರಿಣಾಮಗಳಿಗೆ ಸಂಬಂಧಿಸಿದ ಡಿಸ್‌ಕ್ಲೈಮರ್ (ಹಕ್ಕು ನಿರಾಕರಣೆ) ಪ್ರಸಾರ ಮಾಡಬೇಕು ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ನಿರ್ದೇಶನ ನೀಡಿದೆ.
ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿರುವ ಸಚಿವಾಲಯ, ವೀಕ್ಷಕರಲ್ಲಿ ಜಾಗೃತಿ ಮೂಡಿಸುವ ಕ್ರಮದ ಭಾಗವಾಗಿ ಮನರಂಜನೆ ಮತ್ತು ಸುದ್ದಿಯೇತರ ಕಾರ್ಯಕ್ರಮಗಳೂ ಸೇರಿದಂತೆ ಎಲ್ಲ ರೀತಿ ಕಾರ್ಯಕ್ರಮಗಳ ಮಧ್ಯಂತರ ಅವಧಿಯಲ್ಲಿ ಡಿಸ್‌ಕ್ಲೈಮರ್ ಪ್ರದರ್ಶಿಸಬಹುದು ಎಂದು ತಿಳಿಸಿದೆ. ಹಾಗೆಯೇ, ಮಾಹಿತಿಪೂರ್ಣ, ಜವಾಬ್ದಾರಿಯುತ ವೀಕ್ಷಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಸೂಚನೆಯನ್ನು ಸ್ಪಷ್ಟವಾಗಿ ಓದಬಹುದಾದ ರೀತಿಯಲ್ಲಿ ಪ್ರಕಟಿಸಬಹುದು ಎಂಬ ಸಲಹೆಯನ್ನೂ ನೀಡಿದೆ.
'ಮಾದಕ ವಸ್ತುಗಳ ದುರುಪಯೋಗವು ಸಾರ್ವಜನಿಕ ಆರೋಗ್ಯಕ್ಕೆ, ವಿಶೇಷವಾಗಿ ಯುವಕರ ಮೇಲೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತಿವೆ. ಪ್ರತಿಕೂಲ ಸಾಮಾಜಿಕ, ಆರ್ಥಿಕ ಪರಿಣಾಮಗಳು ಮಾತ್ರವಲ್ಲದೆ ವ್ಯಕ್ತಿತ್ವದ ಮೇಲೂ ಪರಿಣಾಮ ಬೀರುತ್ತವೆ' ಎಂದು ತಿಳಿಸಲಾಗಿದೆ.
'ಮಾದಕ ವಸ್ತುಗಳು ಆರೋಗ್ಯವನ್ನು ನಾಶ ಮಾಡುತ್ತವೆ. ಜೈಲು ಶಿಕ್ಷೆಗೆ ದೂಡುತ್ತವೆ. ಮಾದಕ ದ್ರವ್ಯಗಳಿಗೆ 'ಇಲ್ಲ' ಎಂದು ಹೇಳಿ' ಎನ್ನುವ ಡಿಸ್‌ಕ್ಲೈಮರ್ ಪಠ್ಯ ನೀಡಿದೆ.
'ದೂರದರ್ಶನವು ವ್ಯಾಪಕವಾಗಿ ಬಳಕೆಯಲ್ಲಿರುವ ಸಂವಹನ ಮಾದ್ಯಮವಾಗಿದ್ದು, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ವೀಕ್ಷಕರಿಗೆ ಜವಾಬ್ದಾರಿಯುತ ಸಾಮಾಜಿಕ ಸಂದೇಶ ನೀಡಲು ಪ್ರಮುಖ ಪಾತ್ರವಹಿಸಲಿದೆ' ಎಂದೂ ಅಭಿಪ್ರಾಯಪಟ್ಟಿದೆ.

