ವಾಷಿಂಗ್ಟನ್: ಭಾರತ ಸರ್ಕಾರವು ಸಂಸತ್ತಿನಲ್ಲಿ ಅನುಮೋದನೆ ಪಡೆಯಲು ತಯಾರಿ ನಡೆಸುತ್ತಿರುವ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯು(ಎಫ್‌ಸಿಆರ್‌ಎ) ಕ್ರೈಸ್ತರ ವಿರುದ್ಧದ ಸ್ಪಷ್ಟ ದಾಳಿಯಾಗಿದೆ ಎಂದು ಅಮೆರಿಕದ ಸಂಸದರು ಕಳವಳ ವ್ಯಕ್ತಪಡಿಸಿದ್ದಾರೆ.
ಎನ್‌ಜಿಒ, ಟ್ರಸ್ಟ್, ಶೈಕ್ಷಣಿಕ ಸಂಸ್ಥೆ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಬರುವ ವಿದೇಶಿ ಹೂಡಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ 2026ರ ಮಾರ್ಚ್ 25ರಂದು ಎಫ್‌ಸಿಆರ್‌ಎ ಕಾಯ್ದೆಯನ್ನು ಲೋಕಸಭೆಯಲ್ಲಿ ಪರಿಚಯಿಸಲಾಗಿತ್ತು.
ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಇದೀಗ ಇದೇ ಮಸೂದೆಯನ್ನು ಅಧಿವೇಶನದಲ್ಲಿ ಅನುಮೋದನೆ ಪಡೆಯಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅಮೆರಿಕದ ಸಂಸದ ರೈಲಿ ಮೋರ್, 'ಎಫ್‌ಸಿಆರ್‌ಎ ತಿದ್ದುಪಡಿಯು ಚರ್ಚ್‌ಗಳು ಮತ್ತು ಧಾರ್ಮಿಕ ದತ್ತಿ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಭಾರತ ಸರ್ಕಾರಕ್ಕೆ ಅವಕಾಶ ನೀಡುತ್ತವೆ. ಇದು ಕ್ರೈಸ್ತರ ಮೇಲಿನ ಸ್ಪಷ್ಟ ದಾಳಿಯಾಗುತ್ತದೆ' ಎಂದು ಹೇಳಿದ್ದಾರೆ.
ಒಂದು ವೇಳೆ ಭಾರತ ಸರ್ಕಾರವು ಎಫ್‌ಸಿಆರ್‌ಎ ಕಾಯ್ದೆಯನ್ನು ಜಾರಿಗೊಳಿಸಿದರೆ, ಇದರಿಂದ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದ್ದಾರೆ.
ನಮ್ಮ ಕರ್ತನಾದ ಯೇಸು ಕ್ರಿಸ್ತನ ಪುನರುತ್ಥಾನದ ಸಮಯದಿಂದಲೂ ಭಾರತದಲ್ಲಿ ಕ್ರೈಸ್ತರು ವಾಸವಿದ್ದಾರೆ. ಆದರೆ, ಅಲ್ಲಿ ಇಷ್ಟು ದೀರ್ಘವಾದ ಕ್ರೈಸ್ತ ಇತಿಹಾಸವಿದ್ದರು ಕೂಡ ಭಾರತ ಸರ್ಕಾರವು ಚರ್ಚ್‌ಗಳನ್ನು ಹಿಡಿತಕ್ಕೆ ತೆಗೆದುಕೊಳ್ಳುವ ಉದ್ದೇಶದಿಂದ ಎಫ್‌ಸಿಆರ್‌ಎ ಕಾಯ್ದೆ ಜಾರಿಗೊಳಿಸಲು ಮುಂದಾಗುತ್ತಿದೆ ಎಂದು ಹೇಳಿದ್ದಾರೆ.

