ಮೈಸೂರು: 'ನಮ್ಮ ದೇಶದ ಯುವಕರು ಭಾರತವಷ್ಟೇ ಅಲ್ಲದೆ ಇಡೀ ವಿಶ್ವದ ಅಭಿವೃದ್ಧಿಗೆ ವೇಗ ನೀಡುತ್ತಿ ದ್ದಾರೆ' ಎಂದು ಪ್ರಧಾನಿ ನರೇಂದಿ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು.
ಇಲ್ಲಿನ ದೇವರಾಜ ಮೊಹಲ್ಲಾದ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ಶ್ರೀರಾಮಕೃಷ್ಣ ಆಶ್ರಮ ನಿರ್ಮಿಸಿರುವ 'ವಿವೇಕ ಸ್ಮಾರಕ-ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ'ವನ್ನು ಶನಿವಾರ ಉದ್ಘಾಟಿಸಿದ ನಂತರ, ಯಾದವಗಿರಿಯ ಶ್ರೀರಾಮಕೃಷ್ಣ ವಿದ್ಯಾಶಾಲೆ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾಷಣದ ಉದ್ದಕ್ಕೂ ದೇಶಕ್ಕೆ ಯುವಜನರ ಕೊಡುಗೆಯನ್ನು ಕೊಂಡಾಡಿದ ಅವರು, ವಿಜ್ಞಾನ,ತಂತ್ರಜ್ಞಾನ, ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿರಲು ಯುವಜನತೆಯ ಕೊಡುಗೆಯೇ ಪ್ರಮುಖ ಕಾರಣ ಎಂದರು.
ಇಂದು ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ಉತ್ಪಾದನಾ ಕ್ಷೇತ್ರದಲ್ಲಿ ಬಹಳಷ್ಟು ಮುಂದುವ ರಿದಿದೆ. ವಿಶ್ವದ 3ನೇ ಸ್ಟಾರ್ಟ್‌ಅಪ್ ಇಕೊಸಿಸ್ಟಂ ದೇಶದಲ್ಲಿದೆ. ಭಾರತದವರು ತಯಾರಿಸಿದ ಡಿಜಿಟಲ್ ಪರಿಹಾರಗಳು ಬಹಳಷ್ಟು ದೇಶಗಳಿಗೆ ಪ್ರೇರಣೆಯಾಗಿವೆ. ಮೊಬೈಲ್ ಫೋನ್ ತಯಾರಿಕೆಯಲ್ಲಿ ಭಾರತವು ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಸೆಮಿಕಂಡಕ್ಟರ್ ನಿರ್ಮಾಣದ ಹೊಸ ಯಾತ್ರೆಯನ್ನೂ ಆರಂಭಿಸಿದೆ. ಎಐ, ಡಿಜಿಟೆಕ್, ಬಾಹ್ಯಾಕಾಶ ತಂತ್ರಜ್ಞಾನ, ನಾವೀನ್ಯತೆಯಲ್ಲಿ ಹೊಸ ಅಧ್ಯಾಯ ಬರೆಯುತ್ತಿದೆ. ಇದೆಲ್ಲ ಸಾಧ್ಯವಾಗಿದ್ದು ಯುವಕರ ಸಾಮರ್ಥ್ಯದಿಂದ ಎಂದರು.
ಈಚೆಗೆ ಆಂತರಿಕ್ಷದಲ್ಲೂ ಯುವಜನರು ಗಮನಾರ್ಹ ಸಾಧನೆ ಮಾಡಿದ್ದಾರೆ. ಯುವಕರು ಸಿದ್ಧಪಡಿಸಿದ ಖಾಸಗಿ ಕಂಪನಿಯ ರಾಕೆಟ್ ಆಂತರಿಕ್ಷ ತಲುಪಿದೆ. ಈಗ ಎಲ್ಲ ರಂಗದಲ್ಲೂ ಕ್ಷಮತೆ ತೋರಿಸುತ್ತಿದ್ದಾರೆ. ಡಿಜಿಟಲ್ ಆರ್ಥಿಕತೆ ಬಲಪಡಿಸುತ್ತಿದ್ದಾರೆ' ಎಂದು ಹೇಳಿದರು.
ತಾರತಮ್ಯ ಅಂತ್ಯ: ಯುವಶಕ್ತಿ ಬಲಿಷ್ಠ ಗೊಳಿಸಲು ಕ್ರೀಡೆಗೂ ಆದ್ಯತೆ ಕೊಡುತ್ತಿ ದ್ದೇವೆ. ಖೇಲೊ ಇಂಡಿಯಾ ಮೂಲಕ ಕ್ರೀಡಾ ಸೌಲಭ್ಯ ಹೆಚ್ಚಿಸಿದ್ದೇವೆ. ಅಂತರರಾಷ್ಟ್ರೀಯ ಕ್ರೀಡೆಯಲ್ಲಿ ಭಾರತೀಯರು ಸಾಧನೆ ಮಾಡುತ್ತಿದ್ದಾರೆ. ಯುವತಿಯರು ದೇಶದ ಕೀರ್ತಿ ಬೆಳಗುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು.
'ಶಿಕ್ಷಣ ಮತ್ತು ಅವಕಾಶ ನೀಡುವಲ್ಲಿ ತಾರತಮ್ಯ ಮಾಡಬಾರದು ಎಂದು ವಿವೇಕಾನಂದರು ಹೇಳಿದ್ದರು. ಹೀಗಾಗಿ, ನಾವು ಮಹಿಳಾ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದೇವೆ. ವೈದ್ಯಕೀಯ, ಎಂಜಿನಿಯರಿಂಗ್ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಪಡೆಯಲು ಅವಕಾಶ ಕಲ್ಪಿಸಿದ್ದೇವೆ. ಇದಕ್ಕೆ ತಕ್ಕಂತೆ ಯುವಜನರಲ್ಲಿ ಆತ್ಮವಿಶ್ವಾಸ ಇರಬೇಕು' ಎಂದರು.
ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಗೌತಮಾನಂದ ಹಾಗೂ ಮೈಸೂರು ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಮಾತನಾಡಿದರು. ರಾಜ್ಯಪಾಲ ಥಾವರಚಂದ್ ಗೆಹಲೋತ್, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಕೆ.ಹರೀಶ್‌ಗೌಡ ಪಾಲ್ಗೊಂಡಿದ್ದರು.
ಧ್ಯಾನ ಪೂಜೆ
ವಿವೇಕ ಸ್ಮಾರಕದಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಗೆ ಪೂಜೆ ಸಲ್ಲಿಸಿದ ಪ್ರಧಾನಿ, ಕೆಲ ಕ್ಷಣ ಧ್ಯಾನ ಮಾಡಿದರು. ಬಿಲ್ವಪತ್ರೆ ಸಸಿ ನೆಟ್ಟು ನೀರೆರೆದರು. ಸ್ಮಾರಕದ ಕಿರುವಿಡಿಯೊ ವೀಕ್ಷಿಸಿದರು. ಸಂದರ್ಶಕರ ಪುಸ್ತಕದಲ್ಲಿ ಅನಿಸಿಕೆ ಬರೆದರು. ಬಳಿಕ, ಯಾದವಗಿರಿಯ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ ಅಲ್ಲೂ ರಾಮಕೃಷ್ಣ ಪರಮಹಂಸ, ಶಾರದಾಮಾತೆ ಹಾಗೂ ವಿವೇಕಾನಂದರ ಫೋಟೊಗಳಿಗೆ ಪೂಜೆ ಸಲ್ಲಿಸಿದರು.
ಯುವಕರಿಗೆ ನೀಡುವ ಶಿಕ್ಷಣವೇ ರಾಷ್ಟ್ರ ನಿರ್ಮಾಣದ ಪ್ರಬಲ ಶಕ್ತಿ ಎಂಬುದು ವಿವೇಕಾನಂದರ ಆಶಯವಾಗಿತ್ತು. ಬೇರೆ ದೇಶಗಳಲ್ಲಿ ಯುವಜನರನ್ನು ಹೇಗೆ ಸುಶಿಕ್ಷಿತರನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ವಿಶ್ವಪರ್ಯಟನೆಯಲ್ಲಿ ಗಮನಿಸಿದ್ದರು. ಆದರೆ, ಭಾರತ ಗುಲಾಮಗಿರಿಯಲ್ಲಿತ್ತು. ಯುವಜನರು ಸಂಕಷ್ಟದ ಸಂಕೋಲೆಯಲ್ಲೇ ಸಿಲುಕಿದ್ದರು. ಈಗ ಅವರೇ ದೇಶದ, ವಿಶ್ವದ ವಿಕಾಸಕ್ಕೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ ಎಂದರು.

