ನವದೆಹಲಿ: ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳವು ಮತ್ತು ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ವಿರೋಧ ಪಕ್ಷಗಳ ಸದಸ್ಯರ ಪ್ರತಿಭಟನೆಯ ನಡುವೆಯೇ ಲೋಕಸಭೆಯು ಸೋಮವಾರ ಸಿಜೆಐ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸುವ ಸುಗ್ರೀವಾಜ್ಞೆಯ ಬದಲಿ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಿತು.
ಸುಗ್ರೀವಾಜ್ಞೆ ಹೊರಡಿಸಿದ್ದನ್ನು ಖಂಡಿಸಿ ವಿರೋಧ ಪಕ್ಷಗಳ ಸದಸ್ಯರು ಮಂಡಿಸಿದ ಶಾಸನಬದ್ಧ ನಿರ್ಣಯವೂ ಧ್ವನಿಮತದ ಮೂಲಕ ತಿರಸ್ಕರಿಸಲ್ಪಟ್ಟಿತು.
ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರ ಸಂಕ್ಷಿಪ್ತ ಪ್ರಸ್ತಾವನೆಯ ಬಳಿಕ ಶಾಸನಬದ್ಧ ನಿರ್ಣಯದ ಕುರಿತು ಮಾತನಾಡುವಂತೆ ಸಭಾಧ್ಯಕ್ಷರು ಸದಸ್ಯರನ್ನು ಆಗ್ರಹಿಸಿದರು. ಆದರೆ ಘೋಷಣೆಗಳು ಮುಂದುವರಿದಿದ್ದರಿಂದ ಮಸೂದೆಯನ್ನು ಮತದಾನಕ್ಕೆ ಹಾಕಿ ಬಳಿಕ ಅಂಗೀಕರಿಸಲಾಯಿತು.
ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅಂಗೀಕಾರಗೊಂಡ ಬಳಿಕ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

