ಕೋಲ್ಕತ್ತ: ಸುಲಿಗೆಕೋರರು, ಭ್ರಷ್ಟರೊಂದಿಗೆ ನಂಟು ಹೊಂದಿರುವ ಆರೋಪ ಕೇಳಿಬರುತ್ತಿದ್ದಂತೆ ಆಡಳಿತಾರೂಢ ಬಿಜೆಪಿ ಕಾರ್ಯಕರ್ತರಿಗೆ ಪಶ್ಚಿಮ ಬಂಗಾಳದ ಸಚಿವ ದಿಲೀಪ್ ಘೋಷ್ ಅವರು ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.
'ಹಿಂದಿನ ಟಿಎಂಸಿ ಸರ್ಕಾರದ ಅವಧಿಯಲ್ಲಿ ಸುಲಿಗೆ, ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದ್ದ ಅನೇಕರು ಇದೀಗ ಸರ್ಕಾರ ಬದಲಾದ ಬಳಿಕ ಬಿಜೆಪಿ ನಾಯಕರೊಂದಿಗೆ ನಂಟು ಬೆಳೆಸಿಕೊಳ್ಳಲು ಯತ್ನಿಸುತ್ತಿದ್ದಾರೆ.
ಹೀಗೆ ನಂಟು ಹೊಂದುವುದು ಕಂಡುಬಂದರೆ, 'ಭ್ರಷ್ಟಾಚಾರದ ವಿರುದ್ಧದ ಶೂನ್ಯ ಸಹಿಷ್ಣುತೆ' ನಿಯಮವನ್ನು ಯಾವುದೇ ವಿನಾಯಿತಿ ಇಲ್ಲದೆ ಜಾರಿಗೊಳಿಸಲಾಗುವುದು' ಎಂದು ಅವರು ಎಚ್ಚರಿಸಿದ್ದಾರೆ.
'ಸುಲಿಗೆಯ ಸಂಸ್ಕೃತಿ ಒಂದೇ ದಿನದಲ್ಲಿ ನಿರ್ಮೂಲನೆ ಆಗುವುದಿಲ್ಲ. ಅಂಥ ಸಂಸ್ಕೃತಿಯ ವ್ಯಕ್ತಿಗಳ ಪ್ರಭಾವಕ್ಕೆ ಒಳಗಾಗದೇ ಇರುವುದು ಕಾರ್ಯಕರ್ತರಿಗೆ ಕಷ್ಟ. ಆದ್ದರಿಂದ ಈ ಎಚ್ಚರಿಕೆ ನೀಡಲಾಗಿದೆ' ಎಂದು ಅವರು ವರದಿಗಾರರಿಗೆ ಭಾನುವಾರ ತಿಳಿಸಿದರು.
'ಹೊಸದಾಗಿ ಆಯ್ಕೆ ಆದ ಬಿಜೆಪಿಯ ಕೆಲವು ಶಾಸಕರು ಅಧಿಕಾರದ ರುಚಿ ನೋಡಿದ್ದಾರೆ. ಅಂಥವರೊಂದಿಗೆ ನಂಟು ಬೆಳೆಸಿಕೊಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ರಾಜ್ಯದ ಜನತೆ ಆಡಳಿತದಲ್ಲಿ ಬದಲಾವಣೆ ಬಯಸಿ ನಮಗೆ ಮತ ಹಾಕಿದ್ದಾರೆ ಎಂಬುದನ್ನು ಮರೆಯಬಾರದು' ಎಂದು ಅವರು ಹೇಳಿದ್ದಾರೆ. ಆದರೆ ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸಮಿಕ್ ಭಟ್ಟಾಚಾರ್ಯ ಕೂಡ ಇದೇ ರೀತಿಯ ಎಚ್ಚರಿಕೆ ನೀಡಿದ್ದರು.

