ಕಾಸರಗೋಡು: ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿದ್ದ ಮಂಗಳೂರು ವಿಭಾಗವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗಕ್ಕೆ ವರ್ಗಾಯಿಸುವ ರೈಲ್ವೆ ಮಂಡಳಿಯ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಈ ವಿಭಾಗವನ್ನು ಪಾಲಕ್ಕಾಡ್ ವಿಭಾಗದಲ್ಲೇ ಉಳಿಸಿಕೊಳ್ಳಬೇಕು ಎಂದು ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿಯು ಸರ್ವಾನುಮತದಿಂದ ಆಗ್ರಹಿಸಿದೆ.
ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಕಾಸರಗೋಡು ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರು ಮಂಡಿಸಿದ ನಿರ್ಣಯ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂಡಳಿಯನ್ನು ಒತ್ತಾಯಿಸಲಾಯಿತು. ಶಾಸಕರಾದ ಕಲ್ಲಟ್ರ ಮಾಹಿನ್, ಕೆ. ನೀಲಕಂಠನ್, ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಸಭೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಅಧ್ಯಕ್ಷತೆವಹಿಸಿದ್ದರು.
2026ರ ಅಕ್ಟೋಬರ್ 1ರಿಂದ ಜಾರಿಗೆ ಬರಲಿರುವ ಈ ವಿಭಜನೆಯು, ಉತ್ತರ ಮಲಬಾರ್‍ನಲ್ಲಿ, ಅದರಲ್ಲೂ ವಿಶೇಷವಾಗಿ ಕಾಸರಗೋಡು ಜಿಲ್ಲೆಯಲ್ಲಿ ರೈಲ್ವೆ ಅಭಿವೃದ್ಧಿ ಮತ್ತು ಪ್ರಯಾಣ ಸೌಲಭ್ಯಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಪ್ರಸಕ್ತ ಒಂದೇ ವಲಯದ ವ್ಯಾಪ್ತಿಯಲ್ಲಿರುವ ಪ್ರಯಾಣ ಕಾರಿಡಾರನ್ನು ಎರಡು ಪ್ರತ್ಯೇಕ ವಲಯಗಳಾಗಿ ವಿಭಜಿಸುವುದರಿಂದ, ಕಾಸರಗೋಡು ಮತ್ತು ಮಲಬಾರ್ ಪ್ರದೇಶಕ್ಕೆ ಹೊಸ ರೈಲು ಸೇವೆಗಳು, ರೈಲ್ವೆ ನಿಲ್ದಾಣಗಳು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಿಸಿದ ಅನುಮೋದನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಶಾಸಕರು ಕೇಂದ್ರದ ಗಮನ ಸೆಳೆದಿದ್ದಾರೆ.
ಆದಾಯದ ಪ್ರಮುಖ ಮೂಲವಾದ ಪಣಂಬೂರು ಬಂದರ(ಎನ್‍ಎಂಪಿಎ)ನ್ನು ಒಳಗೊಂಡಿರುವ ಮಂಗಳೂರು ಪ್ರದೇಶವನ್ನು ಕಳೆದುಕೊಳ್ಳುವುದರಿಂದ, ಪಾಲಕ್ಕಾಡ್ ವಿಭಾಗವು ವಾರ್ಷಿಕವಾಗಿ 600 ಕೋಟಿಗೂ ಹೆಚ್ಚಿನ ಆದಾಯದ ನಷ್ಟವನ್ನು ಎದುರಿಸಬೇಕಾಗುತ್ತದೆ.ಇದು ವಿಭಾಗದ ಆರ್ಥಿಕ ಸ್ಥಿರತೆ ಹಾಗೂ ಅಸ್ತಿತ್ವವನ್ನೇ ಅಪಾಯಕ್ಕೆ ಸಿಲುಕಿಸಲಿದೆ.
ರೈಲು ಸೇವೆಗಳ ವೇಳಾಪಟ್ಟಿ ಬದಲಾವಣೆ ಮತ್ತು ತುರ್ತು ಕೋಟಾ ಟಿಕೆಟ್‍ಗಳಂತಹ ವಿಷಯಗಳಿಗಾಗಿ ಮಲಬಾರ್‍ನ ಪ್ರಯಾಣಿಕರು ದೂರದ ಮೈಸೂರು ವಿಭಾಗವನ್ನು ಅವಲಂಬಿಸಬೇಕಾಗಿರುವುದು ಅವರ ಪ್ರಯಾಣದ ಸಂಕಷ್ಟಗಳನ್ನು ಇನ್ನಷ್ಟು ಹೆಚ್ಚಿಸಲಿದೆ. ಈ ಅನ್ಯಾಯದ ವಿಭಜನೆಯ ವಿರುದ್ಧ ಸಂಸತ್ತಿನ ಒಳಗೆ ಮತ್ತು ಹೊರಗೆ ತೀವ್ರ ವಿರೋಧ ವ್ಯಕ್ತಪಡಿಸಿ, ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಕೈಗೊಳ್ಳುವ ಎಲ್ಲಾ ತೀರ್ಮಾನಗಳಿಗೂ ಜಿಲ್ಲಾ ಅಭಿವೃದ್ಧಿ ಸಮಿತಿಯು ತನ್ನ ಸಂಪೂರ್ಣ ಬೆಂಬಲ ಮತ್ತು ಒಗ್ಗಟ್ಟನ್ನು ವ್ಯಕ್ತಪಡಿಸಿತು.




