ಮುಂಬೈ: ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಸರ್ಕಾರ ಕಠಿಣ ಕಾನೂನು ತರಲು ಮುಂದಾಗಿದ್ದರೂ ಸೋರಿಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.
ಮಹಾರಾಷ್ಟ್ರದಲ್ಲಿ ನರ್ಸಿಂಗ್ ಪರೀಕ್ಷೆಗೆ ಕೆಲ ನಿಮಿಷಗಳಿರುವಾಗ ತಮ್ಮ ಮೊಬೈಲ್ನಲ್ಲಿ ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ತೆಗೆದು ಸಹೋದರಿಗೆ ಕಳುಹಿಸಿದ ಆರೋಪದ ಮೇಲೆ ಪರೀಕ್ಷಾ ಮೇಲ್ವಿಚಾರಕಿಯೊಬ್ಬರನ್ನು ಬಂಧಿಸಲಾಗಿದೆ.
ಪರ್ಭಾಣಿಯಲ್ಲಿರುವ ನರ್ಸಿಂಗ್ ಕಾಲೇಜೊಂದರಲ್ಲಿ ಈ ಘಟನೆ ನಡೆದಿದೆ.
ಶುಕ್ರವಾರ ನಡೆದ ಇಂದಿರಾ ಗಾಂಧಿ ಎ.ಎನ್.ಎಂ ನರ್ಸಿಂಗ್ ಸ್ಕೂಲ್ನ 'ಜನರಲ್ ನರ್ಸಿಂಗ್ ಅಂಡ್ ಮಿಡ್ವೈಫರಿ' ಕೋರ್ಸ್ನ ಪ್ರಥಮ ವರ್ಷದ ಪರೀಕ್ಷೆಯ ಸಂದರ್ಭ ಈ ಅಕ್ರಮ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪರೀಕ್ಷಾ ಮೇಲ್ವಿಚಾರಕಿ ರಾಖಿ ಚವಾಣ್, ಆಕೆಯ ಸಹೋದರಿ ರಾಣಿ ಚವಾಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪ್ರತೀಕ್ಷಾ ಕಿರಣ್ ಖಿಲ್ಲಾರೆ, ಈಶ್ವರ್ ಬರಬೋಯ್ನಾ ಮತ್ತು ದಿಲೀಪ್ ಬೋರ್ಕರ್ ಎಂಬುವವರನ್ನೂ ಬಂಧಿಸಲಾಗಿದೆ.
ಪರ್ಭಾಣಿಯ ಪರೀಕ್ಷಾ ಕೇಂದ್ರಕ್ಕೆ ರಾಖಿ ಅವರನ್ನು ಮೇಲ್ವಿಚಾರಕರಾಗಿ ನೇಮಕ ಮಾಡಲಾಗಿತ್ತು. ಪರೀಕ್ಷೆಗೆ ಕೆಲ ನಿಮಿಷಗಳ ಮುನ್ನ, ಮೊಬೈಲ್ನಲ್ಲಿ ಪ್ರಶ್ನೆ ಪತ್ರಿಕೆಯ ಚಿತ್ರಗಳನ್ನು ತೆಗೆದಿದ್ದ ರಾಖಿ, ವಾಟ್ಸ್ಆಯಪ್ ಮೂಲಕ ಸಹೋದರಿಗೆ ಕಳುಹಿಸಿದ್ದಳು. ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದ ಇನ್ಸ್ಪೆಕ್ಟರ್ ಪರಿಶೀಲನೆ ವೇಳೆ ಅಕ್ರಮ ಬೆಳಕಿಗೆ ಬಂದಿದೆ.
ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಅನುಮಾನಗೊಂಡ ಇನ್ಸ್ಪೆಕ್ಟರ್ ವಿಶ್ವಜಿತ್ ಮಠಪತಿ ಅವರು, ಮಹಿಳಾ ಮೇಲ್ವಿಚಾರಕಿಯನ್ನು ತಪಾಸಣೆಗೆ ಒಳಪಡಿಸಿದ್ದರು. ಬಳಿಕ, ಅವರ ಮೊಬೈಲ್ ಫೋನ್ ಅನ್ನು ಪರಿಶೀಲಿಸಿದಾಗ ಪ್ರಶ್ನೆಪತ್ರಿಕೆಯ ಚಿತ್ರಗಳು ಪತ್ತೆಯಾಗಿದೆ.
ಮಹಾರಾಷ್ಟ್ರ ಪರೀಕ್ಷಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.

