ನವದೆಹಲಿ: ಭಾರತವನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಪ್ರಮುಖ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಮುಖ್ಯಸ್ಥರು ಹಾಗೂ ಸಂಸ್ಥಾಪಕರೊಂದಿಗೆ ಸಂವಾದ ನಡೆಸಿದ್ದಾರೆ.
ಹೊಸ ರಂಗದಲ್ಲಿ ಧೈರ್ಯದಿಂದ ಹೆಜ್ಜೆ ಇಟ್ಟಿರುವ ಯುವ ಉದ್ಯಮಿಗಳನ್ನು ಶ್ಲಾಘಿಸಿರುವ ಅವರು, ಸರ್ಕಾರವು ಬಾಹ್ಯಾಕಾಶ ಕ್ಷೇತ್ರದ ನೀತಿಗಳಲ್ಲಿ ಸದಾ ಸ್ಥಿರತೆ ಕಾಯ್ದುಕೊಳ್ಳಲಿದೆ. ಉದ್ಯಮಿಗಳಿಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
ಸಂವಾದದ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ವಿಡಿಯೊ ಹಂಚಿಕೊಂಡಿರುವ ಪ್ರಧಾನಿ, ʼಭಾರತದ ಅತ್ಯಂತ ಪ್ರತಿಭಾವಂತ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಪ್ರತಿನಿಧಿಗಳನ್ನು ಭೇಟಿಯಾದೆ. ಅವರ ಶಕ್ತಿ ಮತ್ತು ಮಹತ್ವಾಕಾಂಕ್ಷೆ ಅತ್ಯಂತ ಪ್ರಭಾವಶಾಲಿಯಾಗಿದೆʼ ಎಂದು ಬರೆದುಕೊಂಡಿದ್ದಾರೆ.
ಖಾಸಗಿ ಉದ್ಯಮಿಗಳು ಸರ್ಕಾರದ ಮೇಲೆ ಇಟ್ಟಿರುವ ನಂಬಿಕೆಯನ್ನು ಶ್ಲಾಘಿಸಿದ ಪ್ರಧಾನಿ, ʼನಾವು ಯಾವುದೇ ನಿರ್ಧಾರ ಕೈಗೊಂಡರೂ ಅದರಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಅಗತ್ಯ. ಪದೇ ಪದೇ ನೀತಿಗಳನ್ನು ಬದಲಾಯಿಸಬಾರದು. ಸ್ವಂತ ತಪ್ಪಿನಿಂದ ಏನಾದರೂ ಹಿನ್ನಡೆಯಾದರೆ ಅದು ಬೇರೆ ವಿಷಯ, ಆದರೆ ಸರ್ಕಾರ ಯಾರನ್ನೂ ಕೈಬಿಡುವುದಿಲ್ಲ ಎಂಬ ವಿಶ್ವಾಸವನ್ನು ಮೂಡಿಸುವುದು ನಮ್ಮ ಆದ್ಯತೆʼ ಎಂದಿದ್ದಾರೆ.
ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ಇರುವ ಅತ್ಯುತ್ತಮ ಪ್ರತಿಭೆಗಳನ್ನು ಆಕರ್ಷಿಸುವ ಸಾಮರ್ಥ್ಯ ಹೊಂದಿದೆ. ವಿದೇಶಿ ಪ್ರತಿಭೆಗಳು ಭಾರತೀಯ ಸ್ಟಾರ್ಟ್ಅಪ್ ಅಥವಾ ಇಸ್ರೊ ಜೊತೆ ಸೇರಿ ಕೆಲಸ ಮಾಡಲು ಬಯಸುವಂತಹ ವಾತಾವರಣವನ್ನು ಸೃಷ್ಟಿಸಬೇಕಿದೆ ಎಂದು ಕರೆ ನೀಡಿದರು..
ಬಾಹ್ಯಾಕಾಶ ತಂತ್ರಜ್ಞಾನವನ್ನು ಕೇವಲ ರಾಕೆಟ್ ಅಥವಾ ಉಪಗ್ರಹಗಳಿಗೆ ಸೀಮಿತಗೊಳಿಸದೆ, ಜನರ ದೈನಂದಿನ ಜೀವನವನ್ನು ಸುಲಭಗೊಳಿಸಲು ಬಳಸಬೇಕು. ಉದಾಹರಣೆಗೆ, ಬಾಹ್ಯಾಕಾಶ ತ್ಯಾಜ್ಯ ನಿರ್ವಹಿಸುವ ಸಂಸ್ಥೆಗಳು ಪರಿಸರ ಸಂಸ್ಥೆಗಳ ಜೊತೆ ಹಾಗೂ ಉಪಗ್ರಹ ತಂತ್ರಜ್ಞಾನ ಸಂಸ್ಥೆಗಳು, ಕೃಷಿ ವಿಶ್ವವಿದ್ಯಾಲಯಗಳ ಜೊತೆ ಕೈಜೋಡಿಸಿ ರೈತರಿಗೆ ನೆರವಾಗಬಹುದು ಎಂದು ಸಲಹೆ ನೀಡಿದರು.
ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಕುತೂಹಲ ಮೂಡಿಸಲು ಅಟಲ್ ಟಿಂಕರಿಂಗ್ ಲ್ಯಾಬ್ಗಳ ಜೊತೆ ನಿಕಟವಾಗಿ ಕೆಲಸ ಮಾಡುವಂತೆ ಸ್ಟಾರ್ಟ್ಅಪ್ಗಳಿಗೆ ಪ್ರಧಾನಿ ಸೂಚಿಸಿದರು.
ಈ ಸಂವಾದದಲ್ಲಿ ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್ , ಪಿಕ್ಸೆಲ್ , ಧ್ರುವ ಸ್ಪೇಸ್, ಬೆಲ್ಲಾಟ್ರಿಕ್ಸ್ ಏರೋಸ್ಪೇಸ್ ಸೇರಿದಂತೆ ಒಟ್ಟು 20ಕ್ಕೂ ಹೆಚ್ಚು ಮುಂಚೂಣಿ ಬಾಹ್ಯಾಕಾಶ ಸ್ಟಾರ್ಟ್ಅಪ್ಗಳ ಮುಖ್ಯಸ್ಥರು ಭಾಗವಹಿಸಿದ್ದರು.

