ಲಖನೌ: ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು, ಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ರಾಮ ಮಂದಿರದಲ್ಲಿನ ದೇಣಿಗೆ ಹಣ ಕಳ್ಳತನ ಪ್ರಕರಣದ ತನಿಖೆಗೆ ಉತ್ತರ ಪ್ರದೇಶ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ತಮಗೆ ಕ್ಲೀನ್ ಚಿಟ್ ನೀಡಿದ ಬೆನ್ನಲ್ಲೇ, ರಾಯ್ ಅವರು ಮಿಶ್ರಾ ವಿರುದ್ಧ ಕಿಡಿಕಾರಿದ್ದಾರೆ.
ಮಿಶ್ರಾ ವಿರುದ್ಧ ಆರೋಪಗಳನ್ನು ಮಾಡಿ 9 ಪುಟಗಳ ಪತ್ರ ಬರೆದಿರುವ ರಾಯ್, ಅಯೋಧ್ಯೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ 2019ರಲ್ಲಿ ತೀರ್ಪು ನೀಡಿದಾಗಿನಿಂದ ರಾಮ ಮಂದಿರ ನಿರ್ಮಾಣದವರೆಗೆ ಏನೆಲ್ಲ ಆಗಿದೆ ಎಂಬುದನ್ನು ವಿವರವಾಗಿ ಉಲ್ಲೇಖಿಸಿದ್ದಾರೆ.
'ನೃಪೇಂದ್ರ ಮಿಶ್ರಾ ಅವರು ತಮ್ಮ ಅನುಕೂಲಕ್ಕಾಗಿ ತಮಗೆ ಬೇಕಾದವರನ್ನು ಮಂದಿರ ನಿರ್ಮಾಣ ಸಮಿತಿಗೆ ಸೇರಿಸಿಕೊಂಡಿದ್ದರು. ಅವರಲ್ಲ್ಲಿ ಒಬ್ಬರು ಮಾತ್ರವೇ ಕಳೆದ ಆರು ವರ್ಷಗಳಲ್ಲಿ ಒಂದು ಅಥವಾ ಎರಡು ಬಾರಿ ಅಯೋಧ್ಯೆಗೆ ಭೇಟಿ ನೀಡಿದ್ದರು. ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ನಿರ್ಧಾರವನ್ನೂ ಮಿಶ್ರಾ ಏಕಪಕ್ಷೀಯವಾಗಿ ತೆಗೆದುಕೊಳ್ಳುತ್ತಿದ್ದರು' ಎಂದು ಆರೋಪಿಸಿದ್ದಾರೆ.
'ಯಾವ ಸಂಸ್ಥೆ ನಿರ್ಮಾಣ ಕಾರ್ಯ ಕೈಗೊಳ್ಳಬೇಕು, ಮಂದಿರದ ವಿನ್ಯಾಸ ಮಾಡುವವರು ಯಾರು? ಎಂಬ ನಿರ್ಧಾರಗಳನ್ನು ಮಾಡಿದ್ದೂ ಮಿಶ್ರಾ ಅವರೇ. ಇತರರ ಸಲಹೆಗಳಿಗೆ ಬೆಲೆಯೇ ಇರಲಿಲ್ಲ' ಎಂದು ದೂರಿದ್ದಾರೆ.
ದೇಣಿಗೆ ಹಣ ದುರುಪಯೋಗದ ಆರೋಪಗಳಿಂದಾಗಿ ಜನಾಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದ ರಾಯ್ ಅವರಿಗೆ, ರಾಜ್ಯ ಸರ್ಕಾರ ರಚಿಸಿರುವ ಎಸ್‌ಐಟಿ ಎರಡು ದಿನಗಳ ಹಿಂದಷ್ಟೇ ಕ್ಲೀನ್ ಚಿಟ್ ನೀಡಿದೆ. ಆದರೆ, ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ರಚನೆಯಾಗಿರುವ ಮತ್ತೊಂದು ಎಸ್‌ಐಟಿ ತನಿಖೆ ಮುಂದುವರಿಸಿದೆ.
ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ್ದ ಮಿಶ್ರಾ!
ದೇಣಿಗೆ ಅಕ್ರಮದ ಆರೋಪಗಳು ಜೂನ್ ತಿಂಗಳಲ್ಲಿ ಕೇಳಿಬಂದ ಸಂದರ್ಭದಲ್ಲಿ ಮಿಶ್ರಾ ಅವರೇ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಮಾಜಿ ಐಎಎಸ್ ಅಧಿಕಾರಿಯೂ ಆಗಿರುವ ಅವರು, ಪ್ರಕರಣವನ್ನು 'ದರೋಡೆ' ಎಂದು ಖಂಡಿಸಿದ್ದರು.

