ಛತ್ರಪತಿ ಸಾಂಭಾಜಿನಗರ: ಮಹಾರಾಷ್ಟ್ರದ ಸಮೃದ್ಧಿ ಎಕ್ಸ್ಪ್ರೆಸ್ ವೇನಲ್ಲಿ ಗೈಲ್ (ಜಿಎಐಎಲ್) ಗ್ಯಾಸ್ ಪೈಪ್ಲೈನ್ ಸೋರಿಕೆಯಾಗಿದ್ದು, ಅಧಿಕಾರಿಗಳು 24 ಕಿ.ಮೀ ರಸ್ತೆ ಸಂಚಾರ ಮಾರ್ಗ ಬದಲಾಯಿಸಿದ್ಧಾರೆ.
ಶನಿವಾರ ಸಂಜೆ ಗಂಗಾಪುರ ತಾಲೂಕಿನ ತಕ್ಲಿವಾಡಿ ಬಳಿ ಎಕ್ಸ್ಪ್ರೆಸ್ ವೇ ಬಳಿ 5 ಗಂಟೆ ಸುಮಾರಿಗೆ ಅನಿಲ ಸೋರಿಕೆಯಾಗಿದ್ದು, ಕೂಡಲೇ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಸೋರಿಕೆ ಕುರಿತಂತೆ ಗೈಲ್ ಸಂಸ್ಥೆಗೆ ಮಾಹಿತಿ ನೀಡಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳವು ಸಜ್ಜಾಗಿ ನಿಂತಿದ್ದು, ಯಾವುದೇ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಾನಿಗೊಳಗಾದ ಪೈಪ್ಲೈನ್ನ ಎರಡೂ ಬದಿಯ ಕವಾಟಗಳನ್ನು ತಜ್ಞರು ಬಂದ್ ಮಾಡಿದ್ದರಿಂದ, ಒತ್ತಡವು ಕ್ರಮೇಣ ಕಡಿಮೆಯಾಗಿದೆ ಎಂದು ಗೈಲ್ ಆಡಳಿತ ಮಂಡಳಿ ತಿಳಿಸಿದೆ.
ಸಮೃದ್ಧಿ ಎಕ್ಸ್ಪ್ರೆಸ್ವೇನ ಚೈನೇಜ್ 447 ಮತ್ತು 470ರ ನಡುವೆ ಮಾರ್ಗ ಬದಲಿಸಲಾಗಿದ್ದು, ವಾಹನಗಳನ್ನು ಧುಲೆ-ಸೊಲ್ಲಾಪುರ ಹೆದ್ದಾರಿಯತ್ತ ತಿರುಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನಯ್ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬೈ ಕಡೆಗೆ ತೆರಳುತ್ತಿದ್ದ ವಾಹನಗಳು ಎಕ್ನ್ಪ್ರೆಸ್ ವೇನ ಹದಾಸ್ ಪಿಂಪಲ್ಗಾವ್ ಬಳಿ ಮಾರ್ಗ ಬದಲಾವಣೆ ಮಾಡಿ ಧುಲೆ-ಸೊಲಾಪುರ ಹೈಗೆ ಪ್ರವೇಶಿಸಿ, ಮಾಲಿವಾಡ ಬಳಿ ಎಕ್ಸ್ಪ್ರೆಸ್ ವೇಗೆ ಮರುಪ್ರವೇಶಿಸುವಂತೆ ತಿಳಿಸಲಾಗಿದೆ.
ಅದೇ ರೀತಿ, ನಾಗ್ಪುರದತ್ತ ಸಾಗುವ ವಾಹನಗಳು ಮಾಲಿವಾಡ ಇಂಟರ್ಚೇಂಜ್ನಲ್ಲಿ ಹೊರಬಂದು, ಧುಲೆ-ಸೊಲ್ಲಾಪುರ ಹೆದ್ದಾರಿಯನ್ನು ಬಳಸಿಕೊಂಡು ಪಿಂಪಲ್ಗಾಂವ್ನಲ್ಲಿ ಮತ್ತೆ ಎಕ್ಸ್ಪ್ರೆಸ್ವೇಯನ್ನು ಪ್ರವೇಶಿಸಲು ಸೂಚಿಸಲಾಗಿದೆ.

