ಕಾಸರಗೋಡು: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಕಾಸರಗೋಡು ಚಿನ್ಮಯ ವಿದ್ಯಾಲಯದಲ್ಲಿ ಸಂಭ್ರಮದೊಂದಿಗೆ ಆಚರಿಸಲಾಯಿತು. ವಿದ್ಯಾಲಯದ ಪ್ರಾಂಶುಪಾಲ ಟಿ. ವಿ. ಸುಕುಮಾರನ್ ಅವರು ರಾಷ್ಟ್ರ ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಚಿನ್ಮಯ ಮಿಷನ್ ಕೇರಳ ಘಟಕದ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದರು.
ದೇಶದ ಸ್ವಾತಂತ್ರ್ಯವೆಂದರೆ ಕೇವಲ ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲ; ಜವಾಬ್ದಾರಿಯ ಪ್ರಜ್ಞೆ, ಶಿಸ್ತು ಮತ್ತು ಮೌಲ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರ ಮೂಲಕವೇ ಸ್ವಾತಂತ್ರ್ಯದ ನಿಜವಾದ ಅರ್ಥವನ್ನು ಅರ್ಥೈಸಿಕೊಳ್ಳಲು ಸಾಧ್ಯ ಎಂದು ಸ್ವಾಮಿ ವಿವಿಕ್ತಾನಂದ ಸರಸ್ವತಿ ಅವರು ಹೇಳಿದರು. ದೇಶದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ ನಿರ್ಣಾಯಕವಾಗಿದ್ದು, ಉತ್ತಮನಾಗರಿಕರಾಗಿ ಬೆಳೆದು ಸಮಾಜ ಮತ್ತು ದೇಶಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು.
ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಸಂವಿಧಾನವು ಎತ್ತಿಹಿಡಿಯುವ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹೊಸ ಪೀಳಿಗೆಯವರು ಅರಿತುಕೊಳ್ಳುವ ಅಗತ್ಯವನ್ನು ಪ್ರಾಂಶುಪಾಲರು ಒತ್ತಿ ಹೇಳಿದರು. ದೇಶದ ಮೇಲಿನ ಪ್ರೀತಿಯನ್ನು ತಮ್ಮ ಕಾರ್ಯಗಳ ಮೂಲಕ ವ್ಯಕ್ತಪಡಿಸಬೇಕು ಹಾಗೂ ವಿದ್ಯಾಭ್ಯಾಸದ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಮಹತ್ವವನ್ನು ಸಾರುವ ಭಾಷಣಗಳನ್ನು ಪ್ರಸ್ತುತಪಡಿಸಿದರು. ದೇಶಪ್ರೇಮ, ರಾಷ್ಟ್ರೀಯ ಏಕತೆ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಜವಾಬ್ದಾರಿಯುತನಾಗರಿಕರಾಗಿ ಬೆಳೆಯಬೇಕಾದ ಅಗತ್ಯತೆ ಮುಂತಾದ ವಿಷಯಗಳು ಮಕ್ಕಳ ಭಾಷಣಗಳಲ್ಲಿ ಪ್ರತಿಬಿಂಬಿತವಾದವು.
ಬಳಿಕ ವಿದ್ಯಾರ್ಥಿಗಳ ನೇತೃತ್ವದಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು. ದೇಶಭಕ್ತಿಗೀತೆಗಳು, ನೃತ್ಯಗಳು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಣೆಗೆ ಮೆರುಗು ನೀಡಿದವು. ವಿದ್ಯಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆ ಕಾರ್ಯಕ್ರಮವನ್ನು ಗಮನಾರ್ಹವಾಗಿಸಿತು.
ವಿದ್ಯಾಲಯದ ಉಪಪ್ರಾಂಶುಪಾಲ ಅಭಿಜಿತ್ ಎಂ.ಕೆ., ಮುಖ್ಯಶಿಕ್ಷಕಿಯರಾದ ಪೂರ್ಣಿಮಾ ಎಸ್.ಆರ್., ಸಿಂಧು ಶಶೀಂದ್ರನ್, ಬೋಧಕ-ಬೋಧಕೇತರ ಸಿಬ್ಬಂದಿ, ಪೋಷಕರು ಹಾಗೂವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇಶ ಪ್ರೇಮ ಮತ್ತು ರಾಷ್ಟ್ರೀಯ ಪ್ರಜ್ಞೆಯಿಂದ ಕೂಡಿದ ಆಚರಣೆ ವಿದ್ಯಾಲಯದ ವಾತಾವರಣಕ್ಕೆ ರಾಷ್ಟ್ರೀಯ ಹಬ್ಬದ ಸಂಭ್ರಮವನ್ನು ತುಂಬಿತು.

.jpeg)
.jpeg)
.jpeg)
