ನವದೆಹಲಿ: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿ ಆಸಾರಾಂಗೆ ಸುಪ್ರೀಂ ಕೋರ್ಟ್ ಗುರುವಾರ ಮಧ್ಯಂತರ ಜಾಮೀನು ನಿರಾಕರಿಸಿದೆ. ಅದಾಗ್ಯೂ, ದಿನ ಪೂರ್ತಿ ಸಹಾಯ ಮಾಡಲು ತನ್ನಿಷ್ಟದ ತರಬೇತಿ ಹೊಂದಿದ ಆರೈಕೆದಾರನನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆ.
ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ 2013ರ ಪ್ರಕರಣದಲ್ಲಿ ಆಸಾರಾಂ ಜೈಲಿನಲ್ಲಿದ್ದಾನೆ.
ಆರೋಗ್ಯದ ಆಧಾರದ ಮೇಲೆ ಮಧ್ಯಂತರ ಜಾಮೀನು ನೀಡಬೇಕೆಂದು ಆಸಾರಾಂ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಮತ್ತು ಪಿ.ಬಿ.ವರಾಲೆ ಅವರಿದ್ದ ನ್ಯಾಯಪೀಠವು ಬಾಕಿ ಉಳಿಸಿಕೊಂಡಿದೆ. ಒಂದು ವೇಳೆ ಆರೋಗ್ಯ ಹದಗೆಟ್ಟರೆ ಪ್ರಕರಣವನ್ನು ಪ್ರಸ್ತಾಪಿಸಲು ಅವನಿಗೆ ಸ್ವಾತಂತ್ರ್ಯ ನೀಡಿದೆ.

