ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ಹಿಂಸಾತ್ಮಕ ಆಡಳಿತ'ದ ವಿರುದ್ಧ ಭಾರತದ ಯುವಜನತೆ ತೋರಿಸುತ್ತಿರುವ ದಿಟ್ಟತನ ಮತ್ತು ಧೈರ್ಯ ಶ್ಲಾಘನೀಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ.
ಇದೇ ವೇಳೆ ಬಿಜೆಪಿ ಗೂಂಡಾಗಳ ದುರ್ವರ್ತನೆ, ನಿಂದನೆ ಹಾಗೂ ಹಿಂಸೆಯನ್ನು ಎದುರಿಸಿದ ಯುವತಿಯರ ಹೋರಾಟವನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಪೊಲೀಸ್ ದೌರ್ಜನ್ಯಕ್ಕೊಳಗಾಗಿದ್ದ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದದ ವಿಡಿಯೊವನ್ನು ರಾಹುಲ್ ಹಂಚಿಕೊಂಡಿದ್ದಾರೆ.
ವಿಡಿಯೊ ಜೊತೆಗೆ ಹಿಂದಿಯಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್, ಮೋದಿಯವರ ಹಿಂಸಾತ್ಮಕ ಆಡಳಿತದ ವಿರುದ್ಧ ಯುವಕ-ಯುವತಿಯರು ತೋರುತ್ತಿರುವ ಧೈರ್ಯ ಶ್ಲಾಘನೀಯ ಹಾಗೂ ವಿದ್ಯಾರ್ಥಿಗಳು ಶಾಂತಿ, ಪ್ರೀತಿ ಮತ್ತು ಹಾಸ್ಯ ಪ್ರಜ್ಞೆಯೊಂದಿಗೆ ತಮ್ಮ ಧ್ವನಿಯನ್ನು ಎತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

