ನವದೆಹಲಿ: 'ನಾನು ಭಾಷಣ ಮಾಡಿದ ಸ್ಥಳವನ್ನು ಶುದ್ಧೀಕರಿಸಿದ ಹೀನ ಘಟನೆಯನ್ನು ನಮ್ಮ ಪಕ್ಷದ ಅನೇಕ ನಾಯಕರೇ ಖಂಡಿಸಲಿಲ್ಲ ಎಂಬ ಬಗ್ಗೆ ನನಗೆ ನೋವಿದೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸಭೆಯಲ್ಲಿ ಖರ್ಗೆ ಅವರು ಈ ವಿಚಾರವನ್ನು ಹಂಚಿಕೊಂಡು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
'ಶುದ್ಧೀಕರಣ ವಿಚಾರವಾಗಿ ನನ್ನ ಬೆಂಬಲಕ್ಕೆ ನಮ್ಮ ಪಕ್ಷದವರೇ ನಿಲ್ಲಲಿಲ್ಲ' ಎಂದು ಯಾರ ಹೆಸರನ್ನು ಉಲ್ಲೇಖಿಸದೇ ಖರ್ಗೆ ಅವರು ಹೇಳಿದ್ದರು. ಈ ವಿಷಯದಲ್ಲಿ ಕೆಲವು ಹಿರಿಯ ನಾಯಕರಿಂದ ಬೆಂಬಲ ಸಿಗದೇ ಇರುವುದಕ್ಕೆ ಖರ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂಬುದು ಅವರ ಹಾವಭಾವದಿಂದ ತಿಳಿಯುತ್ತಿತ್ತು ಎಂದು ಮೂಲಗಳು ಹೇಳಿವೆ.
ಆಗಸ್ಟ್ 8 ರಂದು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ 'ವಿಜಯ್ ಶಂಖನಾದ್' ರ‍್ಯಾಲಿಯನ್ನು ಉದ್ದೇಶಿಸಿ ಖರ್ಗೆ ಮಾತನಾಡಿದ್ದರು. ಅದಾದ ಎರಡು ದಿನಗಳ ನಂತರ ಬಲಪಂಥಿಯ ಸಂಘಟನೆ ಶ್ರೀರಾಮ ಸೇನೆ, ರ‍್ಯಾಲಿ ನಡೆದ ಸ್ಥಳದಲ್ಲಿ 'ಶುದ್ಧೀಕರಣ' ಹವನವನ್ನು ನಡೆಸಿತ್ತು.
ಈ ಘಟನೆಯನ್ನು ಖಂಡಿಸಿದ್ದ ಕಾಂಗ್ರೆಸ್, ಶುದ್ಧೀಕರಣ ಮಾಡಿದವರು ಬಿಜೆಪಿ ಮತ್ತು ಆರ್‌ಎಸ್‌ಎಸ್‌ನೊಂದಿಗೆ ಸಂಪರ್ಕ ಹೊಂದಿದ್ದು, ಇದು ಬಿಜೆಪಿಯ ದಲಿತ ವಿರೋಧಿ ಮನಸ್ಥಿತಿಯನ್ನು ಬಹಿರಂಗಪಡಿಸಿದೆ ಎಂದು ಕಿಡಿಕಾರಿತ್ತು.
ರಾಜ್ಯಸಭೆಯಲ್ಲೂ ಪ್ರಸ್ತಾಪಿಸಿದ್ದ ಖರ್ಗೆ:
ಮುಂಗಾರು ಅಧಿವೇಶನದ ಕೊನೆಯ ದಿನ ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದ ಖರ್ಗೆ, ಈ ಘಟನೆಯಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿದ್ದರು.
'ನಾನು ಇದನ್ನು ರಾಜಕೀಯ ವಿಷಯವಾಗಿ ಪರಿವರ್ತಿಸಲು ಬಯಸುವುದಿಲ್ಲ. ನಾನು ದಲಿತ, ನನ್ನನ್ನು ರಕ್ಷಿಸಿ ಎಂದು ನಾನು ಯಾರಿಗೂ ಹೇಳಿಲ್ಲ, ಯಾರ ಮುಂದೆ ಭಿಕ್ಷೆಯೂ ಬೇಡಿಲ್ಲ. ನನಗೆ ಹೋರಾಡುವ ಶಕ್ತಿಯಿದೆ, ನಾನು ಹೋರಾಡುತ್ತೇನೆ. ಆದರೆ, ಹಲ್ದ್ವಾನಿಯಲ್ಲಿ ವೇದಿಕೆಯನ್ನು ಶುದ್ಧೀಕರಿಸಿದ್ದು ನನಗೆ ಅಸ್ಪೃಶ್ಯತೆಯ ಕರಾಳತೆಯನ್ನು ನೆನಪಿಸಿತು. ವೇದಿಕೆ ಶುದ್ಧೀಕರಿಸಿದವರ ವಿರುದ್ಧ ಅಸ್ಪೃಶ್ಯತೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಮತ್ತು ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂಬುದು ನನ್ನ ಬೇಡಿಕೆಯಾಗಿದೆ' ಎಂದು ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಜೆ.ಪಿ. ನಡ್ಡಾ, 'ಈ ಘಟನೆಯು ದುರದೃಷ್ಟಕರವಾಗಿದ್ದು, ಬಿಜೆಪಿ ಅವರು ಭಾಗಿಯಾಗಿಲ್ಲ' ಎಂದು ತಿಳಿಸಿದ್ದರು.

