ನವದೆಹಲಿ (PTI): ಸಿಗರೇಟು ಹಾಗೂ ತಂಬಾಕು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರವು ಹೆಚ್ಚಳ ಮಾಡಿದ ಪರಿಣಾಮವು ದೇಶದ ಪ್ರಮುಖ ಸಿಗರೇಟು ತಯಾರಿಕಾ ಕಂಪನಿಗಳ ಹಣಕಾಸು ಫಲಿತಾಂಶದಲ್ಲಿ ಗೋಚರಿಸಿದೆ.
ಸಿಗರೇಟು ತಯಾರಿಕಾ ಕ್ಷೇತ್ರದ ಪ್ರಮುಖ ಕಂಪನಿಗಳಾದ ಐಟಿಸಿ, ಗಾಡ್‌ಫ್ರೆ ಫಿಲಿಪ್ಸ್ ಇಂಡಿಯಾ ಮತ್ತು ವಿಎಸ್‌ಟಿ ಇಂಡಸ್ಟ್ರೀಸ್ ತಮ್ಮ ನಿವ್ವಳ ವರಮಾನ, ಲಾಭದ ಪ್ರಮಾಣವು ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಕಡಿಮೆ ಆಗಿರುವ ಬಗ್ಗೆ ಷೇರುಪೇಟೆಗೆ ಮಾಹಿತಿ ನೀಡಿವೆ.
ತೆರಿಗೆಯನ್ನು ಹೆಚ್ಚಳ ಮಾಡಿದ ನಂತರದ ಮೊದಲ ಪೂರ್ಣ ತ್ರೈಮಾಸಿಕ ಇದಾಗಿದೆ.
ದೇಶದ ಸಿಗರೇಟು ಮಾರುಕಟ್ಟೆ ಯಲ್ಲಿ ಈ ಮೂರು ಕಂಪನಿಗಳ ಒಟ್ಟು ಪಾಲು ಶೇ 90ರಷ್ಟಿದೆ. ಕೇಂದ್ರ ಸರ್ಕಾರವು ಈ ವರ್ಷದ ಫೆಬ್ರುವರಿಯಲ್ಲಿ ಸಿಗರೇಟು ಹಾಗೂ ತಂಬಾಕು ಉತ್ಪನ್ನ ಗಳ ಮೇಲಿನ ತೆರಿಗೆಯನ್ನು ಶೇ 40ಕ್ಕೆ ಹೆಚ್ಚಿಸಿದೆ. ಪರಿಹಾರ ಸೆಸ್ ಬದಲು ಪ್ರತಿ 1,000 ಸಿಗರೇಟುಗಳಿಗೆ ಹೆಚ್ಚುವರಿ ಯಾಗಿ ₹2,100ರಿಂದ ₹8,500ರವರೆಗೆ ಎಕ್ಸೈಸ್ ಸುಂಕವಿಧಿಸಿದೆ. ಸಿಗರೇಟಿನ ಉದ್ದವನ್ನು ಆಧರಿಸಿ ಹೆಚ್ಚುವರಿಎಕ್ಸೈಸ್ ಸುಂಕದ ಮೊತ್ತ ನಿರ್ಧಾರ ಆಗುತ್ತದೆ.
ಜೂನ್ ತ್ರೈಮಾಸಿಕದಲ್ಲಿ ಐಟಿಸಿ ಲಿಮಿಟೆಡ್‌ನ ಸಿಗರೇಟು ವಹಿವಾಟಿನ ಒಟ್ಟು ವರಮಾನವು ಶೇ 31.45ರಷ್ಟು ಕಡಿಮೆ ಆಗಿದ್ದು, ₹3,769 ಕೋಟಿಗೆ ತಲುಪಿದೆ. ದೇಶದ ಸಿಗರೇಟು ಮಾರುಕಟ್ಟೆಯಲ್ಲಿ ಐಟಿಸಿ ಪಾಲು ಸರಿಸುಮಾರು ಶೇ 75ರಷ್ಟಿದೆ.
ಗಾಡ್‌ಫ್ರೇ ಫಿಲಿಪ್ಸ್ ಇಂಡಿಯಾ ಕಂಪನಿಯ ನಿವ್ವಳ ಲಾಭವು ಶೇ 44.3ರಷ್ಟು ಕಡಿಮೆ ಆಗಿದ್ದು, ₹198 ಕೋಟಿಗೆ ತಲುಪಿದೆ. ವಿಎಸ್‌ಟಿ ಇಂಡಸ್ಟ್ರೀಸ್‌ನ ತೆರಿಗೆ ನಂತರದ ಲಾಭವು ಶೇ 24.42ರಷ್ಟು ತಗ್ಗಿದ್ದು ₹42 ಕೋಟಿ ಆಗಿದೆ.

