ನವದೆಹಲಿ: ಉತ್ತರ ಪ್ರದೇಶದ ಸಂಭಲ್‌ನ ಶಾಹಿ ಜಮಾ ಮಸೀದಿ-ಹರಿಹರ ದೇಗುಲದ ಸಮೀಕ್ಷೆಗೆ ಆದೇಶಿಸಿದ್ದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಸೀದಿ ಆಡಳಿತ ಸಮಿತಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 18ರವರೆಗೆ ಮುಂದೂಡಿದೆ.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಹಾಗೂ ಅಲೋಕ್ ಅರಾಧೆ ಅವರ ಪೀಠವು ವಿಚಾರಣೆ ಮುಂದೂಡಲು ಮಾಡಲಾಗಿದ್ದ ಮನವಿಯನ್ನು ಮನ್ನಿಸಿತು.
2025 ಮೇ 19ರ ಅಲಹಾಬಾದ್ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸಂಭಲ್ ಜಮಾ ಮಸೀದಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳು ಮಂಗಳವಾರ ವಿಚಾರಣೆಗೆ ಬಂತು.
2014ರ ಆದೇಶ
ಮುಂದಿನ ಆದೇಶದವರೆಗೆ ಧಾರ್ಮಿಕ ಸ್ಥಳಗಳನ್ನು, ವಿಶೇಷವಾಗಿ ಮಸೀದಿ ಮತ್ತು ದರ್ಗಾಗಳನ್ನು, ಮರಳಿ ಪಡೆಯಲು ಕೋರಿ ಸಲ್ಲಿಸುವ ಹೊಸ ಅರ್ಜಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಬಾರದು ಎಂದು ದೇಶದ ಎಲ್ಲಾ ನ್ಯಾಯಾಲಯಗಳಿಗೆ 2024ರ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈಗಾಗಲೇ ಬಾಕಿ ಇರುವ ಇಂತಹ ಪ್ರಕರಣಗಳಲ್ಲಿ ಮಹತ್ವದ ಮಧ್ಯಂತರ ಅಥವಾ ಅಂತಿಮ ಆದೇಶ ನೀಡುವುದಕ್ಕೂ ನಿರ್ಬಂಧ ವಿಧಿಸಿತ್ತು.
ಈ ಹಿನ್ನೆಲೆಯಲ್ಲಿ ಅಲಹಾಬಾದ್ ಹೈಕೋರ್ಟ್ ವಿಚಾರಣೆ ಮುಂದುವರಿಸಬಾರದಿತ್ತು ಎಂದು ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿತ್ತು.

