ನವದೆಹಲಿ: ಮಹಿಳಾ ಕುಸ್ತಿಪಟುಗಳು ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ಡಬ್ಲ್ಯುಎಫ್‌ಐನ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ದೆಹಲಿ ನ್ಯಾಯಾಲಯವು ಸೋಮವಾರ ಖುಲಾಸೆಗೊಳಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅಶ್ವಿನಿ ಪನ್ವಾರ್, ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಮತ್ತು ಡಬ್ಲ್ಯುಎಫ್‌ಐ ಮಾಜಿ ಸಹ ಕಾರ್ಯದರ್ಶಿ ತೋಮರ್ ಅವರನ್ನು ನಿರ್ದೋಷಿ ಎಂದು ತೀರ್ಪು ನೀಡಿದರು.
ಬಳಿಕ ಪ್ರತಿಕ್ರಿಯಿಸಿದ ಬ್ರಿಜ್ ಭೂಷಣ್, 'ನನ್ನ ವಿರುದ್ಧದ ಯಾವುದೇ ಆರೋಪ ಸಾಬೀತಾದರೆ ನಾನು ನೇಣಿಗೇರುತ್ತೇನೆ ಎಂದು ಮೊದಲೇ ಹೇಳಿದ್ದೆ. ತೀರ್ಪಿನ ಬಗ್ಗೆ ಸಂತಸವಿದೆ. ಸದ್ಯಕ್ಕೆ ನಾನು ಇಷ್ಟನ್ನಷ್ಟೇ ಹೇಳಬಲ್ಲೆ. ನ್ಯಾಯಾಲಯದ ವಿವರವಾದ ಆದೇಶದ ಪ್ರತಿಯನ್ನು ಪರಿಶೀಲಿಸಿದ ನಂತರ ಹೆಚ್ಚಿನ ಪ್ರತಿಕ್ರಿಯೆ ನೀಡುತ್ತೇನೆ' ಎಂದಿದ್ದಾರೆ.

