ಕುಂಬಳೆ: ಕುಂಬಳೆ ಗ್ರಾಮ ಪಂಚಾಯತಿಯ ಓಣಂ ಆಚರಣೆ ವಿವಾದಕ್ಕೆಡೆಯಾಗಿದೆ. ಓಣಂ ಆಚರಣೆ 23 ರಂದು ನಡೆಸುವುದಾಗಿ ಪೋಸ್ಟರ್ ಸಿದ್ಧಪಡಿಸಿದ್ದರೂ ಅದಕ್ಕೆ ಸ್ಥಳ ಎಲ್ಲಿ ಎಂದು ತಿಳಿಸಿರಲಿಲ್ಲ. ಕಾರ್ಯಕ್ರಮ ನಡೆಯುವ ಸ್ಥಳವನ್ನು ಕೊನೆಯವರೆಗೆ ಗೌಪ್ಯವಾಗಿರಿಸಿದ ಪಂಚಾಯತಿ ಅಧಿಕಾರಿಗಳು ಕೊನೆಗೆ ಭಾನುವಾರ ಬೆಳಿಗ್ಗೆ ಪಂಚಾಯತಿ ಸದಸ್ಯನೂ ಅಲ್ಲದ ಲೀಗ್ ಕಾರ್ಯಕರ್ತನ ಮನೆಯಲ್ಲಿ ಓಣಂ ಆಚರಣೆ ನಡೆಸಿರುವುದಾಗಿ ಲೀಗ್ ಕಾರ್ಯಕರ್ತರು ತಿಳಿಸಿದ್ದಾರೆ.
ಪಂಚಾಯತಿ ಕಚೇರಿಯಲ್ಲಿ ವಿಶಾಲವಾದ ಸಭಾಂಗಣ ಸಹಿತ ಸೌಕರ್ಯವಿರುವಾಗ ಪಂಚಾಯತಿಗೆ ಸಂಬಂಧಪಟ್ಟ ಹಲವು ವಿವಾದಗಳಲ್ಲಿ ಸಿಲುಕಿಕೊಂಡಿರುವ ಮರ್ಚೆಂಟ್ಸ್ ಅಸೋಸಿಯೇಶನ್ ಘಟಕ ಕಾರ್ಯದರ್ಶಿಯ ಮನೆಯಲ್ಲಿ ಪಂಚಾಯತಿಯ ಓಣಂ ಆಚರಣೆ ನಡೆಸಿರುವುದು ಉತ್ತಮ ಕ್ರಮವಲ್ಲವೆಂದು ಲೀಗ್ ಕಾರ್ಯಕರ್ತರು ತಿಳಿಸುತ್ತಿದ್ದಾರೆ.
ಪಂಚಾಯತಿ ನೇತೃತ್ವದಲ್ಲಿ ಓಣಂ ಆಚರಣೆ ನಡೆಯಲಿದೆಯೆಂದು ವಾಟ್ಸಪ್ ಮೂಲಕ ಪ್ರಚಾರ ನಡೆಸಿದ ಸಂಘಾಟಕರು ಕಾರ್ಯಕ್ರಮ ಎಲ್ಲಿ ನಡೆಯಲಿದೆ ಎಂಬುವುದನ್ನು ಕೊನೆಯ ಕ್ಷಣದವರೆಗೆ ಬಹಿರಂಗಪಡಿಸಿರಲಿಲ್ಲವೆಂದು ಪಂಚಾಯತಿ ಸದಸ್ಯರು ತಿಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ರೆಸಾರ್ಟ್ ಅತಿಥಿಗೃಹದಲ್ಲಿ ಎಂದು ತಿಳಿಸಿರುವುದಾಗಿಯೂ ಅವರು ಆರೋಪಿಸಿದ್ದಾರೆ. ಆದರೆ ಭಾನುವಾರ ಬೆಳಿಗ್ಗೆಯೇ ಓಣಂ ಕಾರ್ಯಕ್ರಮ ಸತ್ತಾರ್ ಎಂಬವರ ಮನೆಯಲ್ಲಿ ಎಂದು ತಿಳಿಸಲಾಯಿತು.
ಗ್ರಾಮ ಪಂಚಾಯತಿ ಕಚೇರಿಯಲ್ಲಿ ನಡೆಸಬೇಕಾದ ಕಾರ್ಯಕ್ರಮವನ್ನು ಪಂಚಾಯತಿಗೆ ಯಾವುದೇ ಸಂಬಂಧವಿಲ್ಲದ ವ್ಯಕ್ತಿಯ ಮನೆಯಲ್ಲಿ ನಡೆಸಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ ಬಳಿಕ ಸ್ಥಳಕ್ಕೆ ತಲುಪಿದ ಬಿಜೆಪಿ ನೇತಾರರು ಹಾಗೂ ಪಂಚಾಯತಿï ಸದಸ್ಯರಾದ ಕಾಂಚಾರ, ಅಜಿತ್ ಕುಮಾರ್ ಎಂಬವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ಅಲ್ಲಿಂದ ಮರಳಿದರು. ಇದೇ ವೇಳೆ ಬಿಜೆಪಿಯ ಇತರ ಮೂವರು ಪಂಚಾಯತಿ ಸದಸ್ಯರಾದ ರಮೇಶ್ ಭಟ್, ಅಮಿತ, ಶಾರದ ಎಂಬವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನೌಕರರ ಹಾಗೂ ಇತರರ ಒಪ್ಪನ, ಹೂ ರಂಗೋಲಿ ಮೊದಲಾದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಓಣಂ ಭೋಜನ ಉಂಡು ಮರಳಿದರು ಎನ್ನಲಾಗುತ್ತಿದೆ. ಇದು ಬಿಜೆಪಿ ಕಾರ್ಯಕರ್ತರಲ್ಲಿ ರೋಷ ಮೂಡಿಸಿದೆ.
ಪಂಚಾಯತಿ ಕಚೇರಿಯಲ್ಲಿ ನಡೆಸಬೇಕಾದ ಕಾರ್ಯಕ್ರಮವನ್ನು ಮರ್ಚೆಂಟ್ಸ್ ಸೊಸೈಟಿ ಹಾಗೂ ಅನಧಿಕೃತ ಶಾಪಿಂಗ್ ಕಾಂಪ್ಲೆಕ್ಸ್‍ಗೆ ಸಂಬಂಧಪಟ್ಟು ಆರೋಪಕ್ಕೆಡೆಯಾದ ವ್ಯಕ್ತಿಯ ಮನೆಯಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಟ್ಟೆ ತುಂಬಿಸಿಕೊಂಡ ಸದಸ್ಯರನ್ನು ಬಿಜೆಪಿಯಿಂದ ಹೊರಹಾಕಬೇಕೆಂದು ಪಕ್ಷದೊಳಗೂ ಒತ್ತಾಯ ಕೇಳಿಬಂದಿದೆ. ತಿನ್ನಲು ಸಿಗುವಲ್ಲಿಗೆ ಓಡಿ ತಲುಪುವ ಸದಸ್ಯರ ನಿಲುವು ಕಳೆದ ಪಂಚಾಯತಿ ಆಡಳಿತ ಸಮಿತಿಯಲ್ಲಿದ್ದ ಒಂಭತ್ತು ಸದಸ್ಯರಿದ್ದ ಬಿಜೆಪಿಗೆ ಈಗಿನ ಪಂಚಾಯತಿ ಆಡಳಿತ ಸಮಿತಿಯಲ್ಲಿ ಸದಸ್ಯರ ಸಂಖ್ಯೆ 5 ಆಗಿ ಕುಸಿದಿದೆಯೆಂದೂ ಕಾರ್ಯಕರ್ತರು ಹೇಳುತ್ತಿದ್ದಾರೆ.
ಕಳೆದ ಪಂಚಾಯತಿ ಆಡಳಿತ ಸಮಿತಿ ನಿರ್ಮಿಸಿದ ಹೊಸ ಬಸ್ ನಿಲ್ದಾಣ ಹಾಗೂ ಅದರ ವಿರುದ್ಧ ವಿವಾದಗಳು ಹುಟ್ಟಿಕೊಂಡಿರುವಾಗ ಅಂದಿನ ಆಡಳಿತ ಸಮಿತಿಯ ಕೊನೆಯ ಸಭೆ ಕೊನೆಗೊಂಡ ಬಳಿಕ ಏರ್ಪಡಿಸಿದ ಹೋಟೆಲ್ ಭೋಜನದಲ್ಲೂ ಕೆಲವು ಬಿಜೆಪಿ ಸದಸ್ಯರು ಪಾಲ್ಗೊಂಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೇ ವೇಳೆ ಭಾನುವಾರ ನಡೆದ ಓಣಂ ಭೋಜನದಲ್ಲಿ ಆಡಳಿತ ಪಕ್ಷದ ಸದಸ್ಯರ ಪೈಕಿ ಹಲವರು ಪಾಲ್ಗೊಂಡಿಲ್ಲವೆಂದೂ ಹೇಳಲಾಗುತ್ತಿದೆ. ಪಂಚಾಯತಿಗೆ ಸಂಬಂಧವುಳ್ಳ ಕಾರ್ಯಕ್ರಮವನ್ನು ಪಂಚಾಯತಿ ಕಚೇರಿಯಲ್ಲಿ ನಡೆಸಲು ಆಸಕ್ತಿ ಇಲ್ಲದವರಿಗೆ ಪಂಚಾಯತಿ ಹಾಗೂ ಜನರೊಂದಿಗಿರುವ ಕಾಳಜಿ ಏನೆಂದು ತಿಳಿಯಬೇಕೆಂದು ಆಡಳಿತ ಪಕ್ಷದಲ್ಲೇ ಒತ್ತಾಯ ಕೇಳಿಬಂದಿದೆಯೆಂದೂ ಹೇಳಲಾಗುತ್ತಿದೆ.
ಕುಂಬಳೆ ಪೇಟೆಯಲ್ಲಿ ನಿರ್ಮಿಸಿದ ವಿವಾದಿತ ಶಾಪಿಂಗ್ ಕಾಂಪ್ಲೆಕ್ಸ್‍ನ ಕುರಿತು ತನಿಖೆ ನಡೆಸುತ್ತಿರುವಂತೆಯೇ ನೌಕರರನ್ನು ಜತೆಗೆ ಉಳಿಸಿಕೊಳ್ಳಲು ಪಂಚಾಯತಿ ಓಣಂ ಆಚರಣೆಯನ್ನು ಖಾಸಗಿ ವ್ಯಕ್ತಿಯ ಮನೆಯಲ್ಲಿ ನಡೆಸಿರುವುದಾಗಿ ಆರೋಪ ಕೇಳಿಬಂದಿದೆ.

.jpg)
.jpg)
