ನವದೆಹಲಿ: ಕಳೆದ ಒಂದು ವಾರದಿಂದ ಸಾರ್ವಜನಿಕವಾಗಿ ಪರಸ್ಪರ ವಾಗ್ದಾಳಿ ನಡೆಸುತ್ತಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಮತ್ತು ಬಿಜೆಪಿ ಸಂಸದೆ, ನಟಿ ಕಂಗನಾ ರನೌತ್ ನಡುವಿನ ವಿವಾದಕ್ಕೆ ರಕ್ಷಾಬಂಧನ ಹಬ್ಬದ ದಿನ ತೆರೆ ಬಿದ್ದಿದೆ.
ಕಂಗನಾ ಅವರಿಗೆ ಅಂಚೆ ಮೂಲಕ ಸಿಹಿ ಮತ್ತು ಉಡುಗೊರೆ ಕಳುಹಿಸಿರುವುದಾಗಿ ತಿಳಿಸಿದ ರಾಮ್‌ದೇವ್, ದೇಶದಲ್ಲಿ ಯಾವುದೇ ಕಾರಣಕ್ಕೂ ದ್ವೇಷ ಮತ್ತು ಹಗೆತನ ಇರಬಾರದು ಎಂದು ಹೇಳಿದ್ದಾರೆ.
ರಾಮ್‌ದೇವ್ ಅವರು ಕಳುಹಿಸಿದ ಉಡುಗೊರೆಯನ್ನು ಸಂತೋಷವಾಗಿ ಸ್ವೀಕರಿಸುವುದಾಗಿ ಕಂಗನಾ ತಿಳಿಸಿದ್ದಾರೆ.
'ನಮ್ಮ ಸಹೋದರಿ ಕಂಗನಾ ರನೌತ್ ಅವರಿಗೆ ಈ ಉಡುಗೊರೆ ಮತ್ತು ಸಿಹಿಯನ್ನು ಕಳುಹಿಸುತ್ತಿದ್ದೇನೆ. ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಎಲ್ಲ ಹಗೆತನವನ್ನು ಬಿಟ್ಟು ಪರಸ್ಪರ ಗೌರವದಿಂದ ನಡೆದುಕೊಳ್ಳುವುದು ಅಗತ್ಯ. ರಕ್ಷಾಬಂಧನದ ಶುಭಾಶಯಗಳನ್ನು ತಿಳಿಸಲು ನಾನು ಅವರಿಗೆ ಕರೆ ಮಾಡುತ್ತೇನೆ' ಎಂದು ಸುದ್ದಿಗಾರರಿಗೆ ರಾಮ್‌ದೇವ್ ಹೇಳಿದ್ದಾರೆ.
ಮುಂದುವರಿದು, 'ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರು ಕೂಡ ಪರಸ್ಪರ ರಾಖಿ ಕಟ್ಟಿಕೊಳ್ಳುವ ಮೂಲಕ ಸೌಹಾರ್ದತೆ ಸಂದೇಶ ಸಾರಬೇಕು' ಎಂದು ಸಲಹೆ ನೀಡಿದ್ದಾರೆ.
'ಹಿರಿಯ ಸಹೋದರ' ಎಂದು ಕರೆದ ಕಂಗನಾ
ರಾಮ್‌ದೇವ್ ಅವರ ವಿಡಿಯೊವನ್ನು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಕಂಗನಾ, ಅವರನ್ನು ಹಿರಿಯ ಸಹೋದರ ಎಂದು ಕರೆದಿದ್ದಾರೆ.
'ಹಬ್ಬಗಳು ತಪ್ಪುಗಳನ್ನು ಮರೆತು ಸಂಬಂಧಗಳನ್ನು ಗಟ್ಟಿಗೊಳಿಸುವುದಕ್ಕಾಗಿ ಇವೆ. ವಾದಗಳಿಗಿಂತ ಸಂವಾದವೇ ಉತ್ತಮ ಎಂಬ ನನ್ನ 'ಹಿರಿಯ ಸಹೋದರ' ರಾಮ್‌ದೇವ್ ಅವರ ಮಾತಿಗೆ ನನ್ನ ಸಹಮತವಿದೆ. ಹಿರಿಯ ಸಹೋದರನಾಗಿ ಅವರು ತೋರಿದ ಪ್ರೀತಿ ಮತ್ತು ಕಳುಹಿಸಿದ ಸಿಹಿಯನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.
ವಿವಾದವೇನು?
ಜೆನ್ ಝೀ ಪ್ರತಿಭಟನಾಕಾರರನ್ನು ಉದ್ದೇಶಿಸಿ 'ಗಟರ್ ಜನರೇಷನ್' ಎಂದು ಕಂಗನಾ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ರಾಮ್‌ದೇವ್, ಕಂಗನಾ ಅವರ ಹೇಳಿಕೆಯನ್ನು ಟೀಕಿಸುವುದರ ಜೊತೆಗೆ ಅವರ ಅರ್ಹತೆಗಳು ಮತ್ತು ಜೀವನದ ಆಯ್ಕೆಗಳ ಕುರಿತು ಪ್ರಶ್ನಿಸಿದ್ದರು.
ಈ ಹೇಳಿಕೆಗಳಿಗೆ ಕಂಗನಾ ತೀವ್ರವಾಗಿ ಪ್ರತಿಕ್ರಿಯಿಸಿದ್ದು, 'ನನ್ನ ಯೌವನ ಅಥವಾ ಮಲಗುವ ಕೋಣೆ ಬಗ್ಗೆ ಕನಸು ಕಾಣಬೇಡಿ. ನನಗೆ ಚಾರಿತ್ರ್ಯದ ಪಾಠ ಹೇಳುವ ಮೊದಲು ನಿಮ್ಮ ದಾಖಲೆಗಳನ್ನು ನೋಡಿ' ಎಂದು ಹೇಳಿದ್ದರು.
ಹೀಗೆ ಇಬ್ಬರ ನಡುವಿನ ಜಗಳ ಮುಂದುವರಿದಿತ್ತು.


