ಅಹಮದಾಬಾದ್: ಇಲ್ಲಿನ ವಸ್ತ್ರಾಪುರದ ಸಾರ್ವಜನಿಕ ಉದ್ಯಾನವೊಂದರಲ್ಲಿ ಮಲಾಲಾ ಯೂಸುಫ್‌ಝೈ ಮತ್ತು ಎನ್ನೀ ಫ್ರಾಂಕ್ ಅವರ ಪುಸ್ತಕಗಳನ್ನು ಓದುತ್ತಿದ್ದ ಸಮೂಹವೊಂದರ ಮೇಲೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಂಪಿನ ಸದಸ್ಯರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಯಾವುದೇ ಸಂಘಟನೆಯನ್ನು ಹೆಸರಿಸದೇ ಇದ್ದರೂ, ದಾಳಿ ನಡೆಸಿದ ಬಜರಂಗದಳದ ಇಬ್ಬರು ಮತ್ತು ಅವರೊಂದಿಗಿದ್ದ 18 ಜನರನ್ನು ಗುರುತಿಸಲಾಗಿದೆ. ಇವರೆಲ್ಲರೂ ಕೇಸರಿ ಶಾಲು ಹಾಕಿಕೊಂಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
'ನಾವು ಉದ್ಯಾನದಲ್ಲಿ ಸೇರುತ್ತಿದ್ದಂತೆಯೇ, ಬಡಿಗೆಗಳನ್ನು ಹಿಡಿದ ಕೆಲವರು ಬಂದು, ಮಲಾಲಾ ಪುಸ್ತಕ ಏಕೆ ಓದುತ್ತಿದ್ದೀರಿ ಎಂದು ಪ್ರಶ್ನಿಸಿದರು. ನನಗೆ ಮತ್ತು ಜೊತೆಯಲ್ಲಿ ಇರುವ ಕೆಲವರಿಗೆ ಹೊಡೆಯಲು ಆರಂಭಿಸಿದರು. ಮಹಿಳೆಯರ ಕೂದಲು ಎಳೆದು, ಒರಟಾಗಿ ನಡೆದುಕೊಂಡರು' ಎಂದು ಆರೋಪಿಸಲಾಗಿದೆ.
'ಯಾರೋ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅವರು ಸ್ಥಳಕ್ಕೆ ಬಂದು, ಗಾಯಾಳುಗಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು' ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಯುವ ಜನರ ಸಮೂಹವು ಸಾಮಾಜಿಕ ಮಾಧ್ಯಮ ಮೂಲಕ ಓದಿನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಬಜರಂಗದಳದ ಸದಸ್ಯರೊಬ್ಬರು, 'ಮಲಾಲಾ ಭಾರತ ವಿರೋಧಿ ನಿಲುವು ಹೊಂದಿದ್ದರಿಂದ ನಾವು ಈ ಪುಸ್ತಕವನ್ನು ವಿರೋಧಿಸುತ್ತೇವೆ' ಎಂದು ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

